ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿಯ 503 ವಸತಿ ಶಾಲೆಗಳು, ಪರಿಶಿಷ್ಟ ಪಂಗಡ 144, ಹಿಂದುಳಿದ ವರ್ಗದ 174 ಸೇರಿ ಒಟ್ಟಾರೆ 821 ವಸತಿ ಶಾಲಾ, ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಸಲು ವಾರ್ಷಿಕ ಅಂದಾಜು 36 ಕೋಟಿ ರೂ. ಬೇಕಾಗುತ್ತದೆ. ಮೂರು ಇಲಾಖೆಗಳು ಕ್ರಮವಾಗಿ 23 ಕೋಟಿ ರೂ., 6 ಕೋಟಿ ರೂ. ಮತ್ತು 7 ಕೋಟಿ ರೂ. ವ್ಯಯಿಸಬೇಕಾಗುತ್ತದೆ.
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ವಸತಿ ಶಾಲೆಗಳ 29 ಕೋಟಿ ರೂಪಾಯಿ ವಿದ್ಯುತ್ ಬಿಲ್ ಅನ್ನು ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಅಡಿ ಒದಗಿಸುವ ಅನುದಾನದ ಮೂಲಕ ಭರಿಸಬೇಕು. ಉಚಿತ ವಿದ್ಯುತ್ ಸೌಲಭ್ಯವನ್ನು ಮಿತವಾಗಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು ಎಂದು ಪ್ರಾಂಶುಪಾಲರಿಗೆ ಮತ್ತು ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ಹಿಂದುಳಿದ ವರ್ಗಗಳ ವಸತಿ ಶಾಲೆಗಳ 7 ಕೋಟಿ ರೂ. ಬಿಲ್ ಅನ್ನು ಇದೇ ಇಲಾಖೆಯ ನಿರ್ವಹಣಾ ಲೆಕ್ಕ ಶಿರ್ಷಿಕೆಯಡಿ ಒದಗಿಸಲಾಗಿರುವ ಅನುದಾನದಲ್ಲಿ ತ್ರೈಮಾಸಿಕವಾರು ಇಂಧನ ಇಲಾಖೆಗೆ ಮರುಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.