ಗದಗ : “ಅಭಿವೃದ್ಧಿಯೇ ನಮ್ಮ ತಾಯಿ ತಂದೆ, ಗ್ಯಾರಂಟಿಯೇ ನಮ್ಮ ಬಂಧು ಬಳಗ ಎಂದು ನಾವು ನಂಬಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗದಗದ ರೋಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾನುವಾರ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು ಹೇಳಿದಿಷ್ಟು;
“ಜಿ.ಎಸ್ ಪಾಟೀಲ್ ಪಾಟೀಲ್ ಅವರು ಈ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳ ಮಾಹಿತಿಯ ಕಲ್ಲುಗಳನ್ನು ನೋಡುತ್ತಿದ್ದರೆ, ಅದರಲ್ಲೇ ಒಂದು ಮನೆ ಕಟ್ಟಿಕೊಳ್ಳಬಹುದು. ಆಮೂಲಕ ಅವರು ಈ ಕ್ಷೇತ್ರವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುತ್ತಿದ್ದಾರೆ.
ಅಧಿಕಾರ ನಶ್ವರ, ಕಾಂಗ್ರೆಸ್ ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ ಎಂಬಂತೆ ನಾವು ನಿಮ್ಮ ಸೇವೆ ಮಾಡುತ್ತಿದ್ದೇವೆ.
ಕೇವಲ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗೆ ಮಾತ್ರ ನಾನು ಬಂದಿಲ್ಲ. ಸಜ್ಜನ, ಕ್ರಿಯಾಶೀಲವಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಧೀಮಂತ ನಾಯಕ ಜಿ.ಎಸ್ ಪಾಟೀಲ್ ಅವರನ್ನು ನಾಲ್ಕು ಬಾರಿ ವಿಧಾನಸಭೆಗೆ ಆರಿಸಿ ಕಳುಹಿಸಿದ ನಿಮಗೆ ನಾನು ಅಭಿನಂದನೆ ಸಲ್ಲಿಸಲು ಬಂದಿದ್ದೇನೆ.
ನಮ್ಮ ಸರ್ಕಾರದ ಅಧಿಕೃತ ಸಂಖ್ಯಾಬಲ 138, ಇನ್ನು ಇಬ್ಬರು ಪಕ್ಷೇತರರು ನಮಗೆ ಬೆಂಬಲವಾಗಿ ನಿಂತಿದ್ದಾರೆ. ಇವರ ಜತೆಗೆ ಬೇರೆಯವರೂ ನಮಗೆ ಬೆಂಬಲವಾಗಿ ನಿಂತಿದ್ದು, ಅವರ ಬಗ್ಗೆ ಇಲ್ಲಿ ಚರ್ಚೆ ಬೇಡ. 140ರಲ್ಲಿ ಜಿ.ಎಸ್ ಪಾಟೀಲ ಅವರೂ ಒಂದು ಭಾಗವಾಗಿದ್ದು, ಅವರ ನಾಯಕತ್ವ, ಹೆಚ್.ಕೆ. ಪಾಟೀಲ್ ಅವರ ಮುಖಂಡತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ಈ ಕಾರ್ಯಕ್ರಮಕ್ಕೆ ಬರುವ ಮುನ್ನ ನಾನು ಹಾಗೂ ಮುಖ್ಯಮಂತ್ರಿಗಳು ಬೀರಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ಮುಖ್ಯಮಂತ್ರಿಗಳು ಜನರಿಗೆ ನಿಮ್ಮಲ್ಲಿ ಯಾರಾದರೂ ಹಸಿವಿನಿಂದ ಇದ್ದೀರಾ ಎಂದು ಕೇಳಿದರು. ಅದಕ್ಕೆ ಅಲ್ಲಿದ್ದ ಜನರು ಇಲ್ಲ ಎಂದು ಹೇಳಿದರು. ಈ ದೇಶದಲ್ಲಿ ಯಾವುದೇ ಮುಖ್ಯಮಂತ್ರಿಗಳಿಗೂ ಜನರ ಬಳಿ ಈ ಪ್ರಶ್ನೆ ಕೇಳುವ ಧೈರ್ಯ ಇಲ್ಲ.
ಗ್ಯಾರಂಟಿಗಳಿಂದ ಜನರ ಬದುಕಿನಲ್ಲಿ ಬದಲಾವಣೆ
ಅನ್ನಭಾಗ್ಯ ಯೋಜನೆಯಲ್ಲಿ ಅನ್ನ ದಾಸೋಹ, ಗೃಹಲಕ್ಷ್ಮಿಯಲ್ಲಿ ಮಹಿಳೆಯರ ಸಬಲೀಕರಣ, ಗೃಹಜ್ಯೋತಿ ಮೂಲಕ ಸಮಾಜಕ್ಕೆ ಬೆಳಕು, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವ, ಯುವನಿಧಿಯಲ್ಲಿ ಕಾಯಕದ ಆಶಯ ಹೊಂದಲಾಗಿದೆ. ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ 350 ಕೋಟಿ ಟ್ರಿಪ್ (ಟಿಕೆಟ್ ಗಳಷ್ಟು) ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. ಇದೆಲ್ಲವೂ ಜನರ ಅಭಿವೃದ್ಧಿಯಲ್ಲವೇ?
ಬಿಜೆಪಿಯವರು ಸದಾ ಭಾವನೆ ಮೇಲೆ ರಾಜಕೀಯ ಮಾಡುತ್ತಾರೆ. ನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ಈ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ಸಾವಿರ ಕೋಟಿ ನೀಡಲಾಗುತ್ತಿದ್ದು, ಆಮೂಲಕ ಪ್ರತಿ ಕ್ಷೇತ್ರಕ್ಕೆ ₹250 ಕೋಟಿ ಸರಾಸರಿ ಹಣ ನೀಡಲಾಗುತ್ತಿದೆ. ಆಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ನಿಮ್ಮ ಅಭಿವೃದ್ಧಿ ಮಾಡಿದ್ದೆವೋ ಇಲ್ಲವೋ ಎಂಬ ವಿಚಾರವಾಗಿ ನಮಗೆ ಬಿಜೆಪಿಯವರ ಪ್ರಮಾಣಪತ್ರ ಬೇಡ. ನಿಮ್ಮ ಆತ್ಮಸಾಕ್ಷಿಯ ಉತ್ತರವೇ ನಮಗೆ ಸಾಕು.
ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ರೂಪಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ.
ಗಾಂಧೀಜಿ ಬೆಳಗಾವಿ ಅಧಿವೇಶನ ಶತಮಾನೋತ್ಸವಕ್ಕೆ ಆಹ್ವಾನ
ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನೂರು ವರ್ಷಗಳು ಪೂರೈಸಲಾಗಿದೆ. ಈಗ ಆ ಸ್ಥಾನದಲ್ಲಿ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಕೂತಿದ್ದಾರೆ. ಗಾಂಧೀಜಿ ಅವರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವು ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲು ಹೆಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಸಾರ್ವಜನಿಕ ಸಭೆಯನ್ನು ನಾವು ಆಯೋಜಿಸಿದ್ದೇವೆ. ಈ ವೇದಿಕೆಯಿಂದಲೇ ನಾನು ನಿಮ್ಮೆಲ್ಲರಿಗೂ ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ. ಈ ಐತಿಹಾಸಿಕ ಕ್ಷಣವನ್ನು ನೀವು ಕಣ್ತುಂಬಿಕೊಳ್ಳಬೇಕು. ಸುವರ್ಣಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೈಸೂರು ದಸರಾದಂತೆ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ.
ಗಾಂಧೀಜಿ ಅವರು ಈ ದೇಶದ ಆಸ್ತಿ. ಹೆಚ್.ಕೆ ಪಾಟೀಲ್ ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಗದಗ ಜಿಲ್ಲೆಯಲ್ಲಿ ಗ್ರಾಮೀಣ ವಿವಿಯಲ್ಲಿ ಗಾಂಧೀಜಿ ಅವರ ಸಬರಮತಿ ಆಶ್ರಮವನ್ನು ನಿರ್ಮಿಸಿದ್ದಾರೆ. ಆಮೂಲಕ ಜನಸಾಮಾನ್ಯರು ಅದನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಆಮೂಲಕ ಜನರಿಗೆ ಗಾಂಧಿ ತತ್ವ, ಗಾಂಧಿ ಆದರ್ಶ ಪಸರಿಸಲು ಈ ಯೋಜನೆ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ.
ಹೆಚ್.ಕೆ ಪಾಟೀಲ್ ಅವರ ಶುದ್ಧ ಕುಡಿಯುವ ನೀರಿನ ಘಟಕದಿಂದ ಸ್ಫೂರ್ತಿ:
ನಾವು ವಿರೋಧ ಪಕ್ಷದಲ್ಲಿದ್ದಾಗ ಪಕ್ಷದ ಸಂಘಟನೆ ವಿಚಾರವಾಗಿ ಪ್ರವಾಸ ಮಾಡುತ್ತಿದ್ದಾಗ ಶುದ್ಧ ಕುಡಿಯುವ ನೀರಿನ ಘಟಕ ನೋಡಿದೆ. ಇದನ್ನು ಮಾಡಿದವರು ಯಾರು ಎಂದು ಕೇಳಿದಾಗ ಹೆಚ್.ಕೆ ಪಾಟೀಲ್ ಎಂದು ಹೇಳಿದರು. ನಂತರ ರೋಣಾದಲ್ಲಿ ಅದೇ ರೀತಿಯ ಶುದ್ಧ ಕುಡಿಯುವ ನೀರಿನ ಘಟಕ ನೋಡಿದೆ. ಕೂಡಲೇ ನಾನು ನನ್ನ ಸಹೋದರನಿಗೆ ಕರೆ ಮಾಡಿ ಒಂದು ತಂಡ ಮಾಡಿಕೊಂಡು ಈ ಘಟಕ ವೀಕ್ಷಣೆ ಮಾಡಲು ಹೇಳಿದೆ. ಅವರು ಬಂದು ನೋಡಿದ ನಂತರ ನಮ್ಮ ಭಾಗದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿದೆವು. ಮೊದಲನೇ ಘಟಕವನ್ನು ಹೆಚ್.ಕೆ ಪಾಟೀಲ್ ಅವರಿಂದ ಉದ್ಘಾಟನೆ ಮಾಡಿಸಿದೆ. ನಿಮ್ಮಿಂದ ಸ್ಪೂರ್ತಿಗೊಂಡು ನನ್ನ ತಮ್ಮ ಮೂರು ಬಾರಿ ಸಂಸದನಾಗಿ ಆಯ್ಕೆಯಾದ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ನಂತರ ಇದು ಇಡೀ ರಾಜ್ಯಾದ್ಯಂತ ವಿಸ್ತರಣೆಯಾಯಿತು. ಹೀಗೆ ನಿಮ್ಮ ಜಿಲ್ಲೆಯ ಅನೇಕ ನಾಯಕರು ಅನೇಕ ಕಾರ್ಯಕ್ರಮ ರೂಪಿಸಿಕೊಂಡು ಬಂದಿದ್ದಾರೆ.
ರೋಣ ಕ್ಷೇತ್ರದಲ್ಲಿ ಜಿ.ಎಸ್ ಪಾಟೀಲ್ ಅವರ ಕುಟುಂಬ ನಾಯಕರಾಗಿ ಅಲ್ಲ ಸೇವಕರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ರೈತ ಕುಟುಂಬದಿಂದ ಬಂದು ನಿಮ್ಮ ಸೇವೆ ಮಾಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಿ, ಇಡೀ ಸರ್ಕಾರ ಅವರ ಬೆನ್ನಿಗೆ ನಿಲ್ಲಲು ನಾನು ಹಾಗೂ ಮುಖ್ಯಮಂತ್ರಿಗಳು ಬಂದಿದ್ದೇವೆ. ನಾನು ಡಿಸಿಎಂ ಆದರೂ ನನ್ನ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಮಾಡಲು ನನ್ನಿಂದ ಸಾಧ್ಯವಾಗಿಲ್ಲ.
ಅನುಮತಿ ಸಿಕ್ಕ ಕೂಡಲೇ ಮಹದಾಯಿ ಯೋಜನೆ ಕೆಲಸ ಆರಂಭ
ನಿಮ್ಮ ಕಾಲದಲ್ಲೇ ಕೆಲವು ನೀರಾವರಿ ಯೋಜನೆಗಳು ಆಗಬೇಕು ಎಂದು ಜಿ.ಎಸ್ ಪಾಟೀಲ್ ಅವರು ನನ್ನ ಬೆನ್ನತ್ತಿದ್ದಾರೆ. ಅವರ ಜತೆಗಿನ ಸಂಬಂಧ, ಅವರು ನಮ್ಮ ಪಕ್ಷಕ್ಕೆ ನೀಡಿರುವ ಶಕ್ತಿಗೆ ನಾನು ಅವರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ.
ಇಂದು ₹200 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮಹದಾಯಿ ಯೋಜನೆಯೂ ಈ ಭಾಗಕ್ಕೆ ಬರಲಿದೆ. ಯೋಜನೆ ಅನುಮತಿ ನೀಡಲು ನಾನು ಹಾಗೂ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ್ದೇವೆ. ಯೋಜನೆ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕೇಂದ್ರ ಅರಣ್ಯ ಇಲಾಖೆ ಅನುಮತಿ ದೊರೆತ ತಕ್ಷಣ ಕಾಮಗಾರಿ ಮಾಡಲಾಗುವುದು. ಈ ಕ್ಷೇತ್ರ ಹಾಗೂ ರೈತರ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ನಮ್ಮ ಸರ್ಕಾರ ಮಾಡಲಿದೆ.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಆಮೂಲಕ ರಾಜ್ಯಕ್ಕೆ ಸಂದೇಶ ರವಾನಿಸಿದ್ದಾರೆ. ನಮ್ಮ ಸರ್ಕಾರ ನಿಮ್ಮ ಸೇವೆ ಮುಂದುವರಿಸಲಿದೆ.
ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿನ ಮಾತುಗಳು:
ಧರ್ಮ ಯಾವುದಾದರೂ ತತ್ವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು ಎಂದು ನಾವು ನಂಬಿದ್ದೇವೆ. ದೇವಾಲಯದ ಒಳಗೆ ಹೋಗಿದ್ದಾಗ ಅಲ್ಲಿ ಬರೆಯಲಾಗಿದ್ದ ಕೆಲವು ನುಡಿಮುತ್ತುಗಳು ಓದಿದೆ.
ಜಾತಿ ಜಾತಿ ಎಂಬುದನ್ನು ಪಕ್ಕಕ್ಕಿಟ್ಟು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಹಿರಿಯರ ಮಾತನ್ನು ಅಲ್ಲಿ ಬರೆಯಲಾಗಿದೆ.
ನನ್ನ ಊರಿನಲ್ಲೂ ಬೀರಲಿಂಗೇಶ್ವರ ಸ್ವಾಮಿ ದೇವಾಲಯವಿದೆ. ನಮ್ಮ ಊರಿನಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡಬೇಕಾದರೆ ಹಾಗೂ ಬೆಳೆ ಕಟಾವು ಮಾಡಿದ ನಂತರ ಬೀರಲಿಂಗೇಶ್ವರನಿಗೆ ಪೂಜೆ ಮಾಡಿಸಿ ಪ್ರಾರಂಭಿಸುವ ಸಂಪ್ರದಾಯ ಮಾಡಿಕೊಂಡು ಬಂದಿದ್ದೇವೆ.
ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ನಿಮ್ಮ ಕಷ್ಟ ಸುಖಗಳನ್ನು ದೇವರ ಬಳಿ ಹೇಳಿಕೊಳ್ಳಲು ದೇವಾಲಯ ಕಟ್ಟಿದ್ದೀರಿ. ಬೀರಲಿಂಗೇಶ್ವರ ಶಿವನ ಸ್ವರೂಪವಾಗಿದ್ದು ಆತನನ್ನು ಆರಾಧಿಸಲು ನಾವು ಸೇರಿದ್ದೇವೆ. ಜಿ.ಎಸ್ ಪಾಟೀಲ್ ಅವರ ಒತ್ತಾಯದ ಮೇರೆಗೆ ನಾನು ಮುಖ್ಯಮಂತ್ರಿಗಳು ಈ ಚಿಕ್ಕ ಹಾಗೂ ಚೊಕ್ಕವಾದ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದೇವೆ.
ಬೀರಲಿಂಗೇಶ್ವರ ಹಾಗೂ ನಿಮ್ಮ ಕೃಪೆ ನನ್ನ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಡಬ್ಲ್ಯುಪಿಎಲ್ 2025 ಹರಾಜು: ಮಿನಿ ಹರಾಜಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | WPL 2025 Auction