ಮೈಸೂರು : ಚಾಮುಂಡೇಶ್ವರಿ ದೇಗುಲದ ಸೀರೆ ಕಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕೃಷ್ಣರಾಜ ಪೊಲೀಸ್ ಠಾಣೆಗೆ ಚಾಮುಂಡೇಶ್ವರಿ ದೇವಾಲಯದ ಕಾರ್ಯದರ್ಶಿಯಾಗಿರುವ ರೂಪ ದೂರು ಸಲ್ಲಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ರೂಪ ಅವರ ವಿರುದ್ಧ ಚಾಮುಂಡೇಶ್ವರಿ ಬೆಟ್ಟದಲ್ಲಿ ಸೀರೆ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಇದೀಗ ಸ್ನೇಹಮಯಿ ಕೃಷ್ಣ ವಿರುದ್ಧ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನಿನ್ನೆ ರಾತ್ರಿ ಕೆಆರ್ ಠಾಣೆಗೆ ರೂಪ ಅವರು ದೂರು ನೀಡಿದ್ದಾರೆ.
ಪ್ರಕರಣ ಹಿನ್ನೆಲೆ?
ಮೈಸೂರು ದಸರಾ ವೇಳೆ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿಗೆ ಭಕ್ತಿಯಿಂದ ಸೀರೆಗಳನ್ನು ಸಮರ್ಪಿಸುತ್ತಾರೆ. ಇದರಲ್ಲಿ ಬಹುತೇಕ ರೇಷ್ಮೆ ಸೀರೆಗಳು ಇರುತ್ತವೆ. ಹೀಗೆ ಭಕ್ತಿಯಿಂದ ಸಮರ್ಪಿತವಾದ ಸೀರೆಗಳನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸಿ ಕಾಳಸಂತೆಯಲ್ಲಿ ಅರ್ಧಬೆಲೆ ಮಾರಾಟ ಮಾಡುವ ಗಂಭೀರ ಆರೋಪ ರೂಪಾ ವಿರುದ್ಧ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ವಿಡಿಯೋ ಚಿತ್ರೀಕರಣ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.
ಭಕ್ತರು ಭಕ್ತಿಯಿಂದ ಸಮರ್ಪಿಸಿದ ಲಕ್ಷಾಂತರ ಸೀರೆಗಳನ್ನು ಯುವಕನೋರ್ವ ರೂಪಾಗೆ ಸಂಬಂಧಿಸಿದ ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಕಾರಿನಲ್ಲಿ ತುಂಬಿಕೊಂಡು ಕಾಳ ಸಂತೆಯಲ್ಲಿ ಅರ್ಧಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಲಕ್ಷಾಂತರ ರೂಪಾಯಿ ಬೆಲೆಯ ಸೀರೆಗಳನ್ನ ಈ ರೀತಿ ಕದ್ದು ಕಾಳಸಂತೆಗೆ ಮಾರಾಟ ಮಾಡುತ್ತಿರುವ ದೂರುಗಳಿವೆ. ರೂಪಾ ಹಾಗೂ ಅವರ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.