ಬೆಂಗಳೂರು : ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಬಾಲಾಪರಾಧಿಗಳು ಇದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 5000ಕ್ಕೂ ಹೆಚ್ಚು ಬಾಲಾಪರಾಧಿಗಳ ಮೇಲೆ ಪ್ರಕರಣ ದಾಖಲಾಗಿವೆ.ಈ ಪೈಕಿ ಬೆಂಗಳೂರು ನಗರದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ವಿಧಾನಪರಿಷತ್ ಸದಸ್ಯ ಎಸ್ ವಿ ಸಂಕನೂರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉತ್ತರ ನೀಡಿದೆ.
ಬಾಲಾಪರಾಧಿಗಳ ವಿಚಾರಣೆಯು ಕಾಲಮಿತಿ ಒಳಗಾಗಿ ನಡೆಯದೆ ಇರುವುದರಿಂದ ಬಾಲ ಮಂದಿರಗಳು ಭರ್ತಿ ಆಗುತ್ತಿವೆ ಎಂಬ ಆರೋಪವೂ ಕೇಳಿ ಬಂದಿದೆ. ಸದ್ಯ ರಾಜ್ಯದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆಗಾಗಿ 1 ವಿಶೇಷ ಗೃಹ, 17 ವೀಕ್ಷಣಾಲಯ, 1 ಪ್ಲೇಸ್ ಆಫ್ ಸೇಫ್ಟಿ ಒಳಗೊಂಡು 19 ಸಂಸ್ಥೆಗಳು ಕಾರ್ಯನಿರ್ವಹಣೆ ಮಾಡುತ್ತಿವೆ.ಈ 19 ಸಂಸ್ಥೆಗಳಲ್ಲಿ 600 ಮಕ್ಕಳಿಗೆ ರಕ್ಷಣೆ ಕಲ್ಪಿಸಲು ಅವಕಾಶ ಇದೆ. ಇನ್ನು ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಪುನರ್ವಸತಿಗಾಗಿ ವಿಜಯಪುರ ಹೊರತಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲನ್ಯಾಯ ಮಂಡಳಿ ಕಾರ್ಯನಿರ್ವಹಣೆ ಮಾಡುತ್ತಿವೆ.
2022-23ರಲ್ಲಿ ರಾಜ್ಯದಲ್ಲಿ ಒಟ್ಟು 2010 ಬಾಲಾಪರಾಧಿಗಳ ವಿರುದ್ಧ ಕೇಸ್ ದಾಖಲಾಗಿದ್ದರೆ, 2023-24ರಲ್ಲಿ 2, 132 ಹಾಗೂ 2024- 25ರಲ್ಲಿ 1,764ರಷ್ಟು ಬಾಲಾಪರಾಧಿಗಳ ವಿರುದ್ಧ ಕೇಸ್ ಬಂದಿವೆ. ಇನ್ನು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಾಲಾಪರಾಧಿಗಳ ಸಂಖ್ಯೆ ಎಷ್ಟಿದೆ ಎಂದರೆ ಬಳ್ಳಾರಿಯಲ್ಲಿ188, ವಿಜಯಪುರ ದಲ್ಲಿ 104, ಬಾಗಲಕೋಟೆಯಲ್ಲಿ 139, ಬೆಳಗಾವಿಯಲ್ಲಿ 267,
ಮೈಸೂರಲ್ಲಿ 341 ಹಾಗೂ ರಾಯಚೂರಲ್ಲಿ 154 ಬಾಲಾಪರಾಧಿಗಳು ಇದ್ದಾರೆ ಎಂದು ತಿಳಿದುಬಂದಿದೆ.