ಬೆಂಗಳೂರು : ತಮ್ಮ ಸ್ಕೂಟರ್‌ಗೆ ಬಸ್ ಡಿಕ್ಕಿಯಾಗಿದೆ ಎಂದು ಆರೋಪಿಸಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಮಹಿಳೆ ಹಾಗೂ ಆಕೆಯ ಸೋದರ ಹಲ್ಲೆ ನಡೆಸಿರುವ ಘಟನೆ ಮಾಗಡಿ ರಸ್ತೆಯ ಸುಮನಹಳ್ಳಿ ಮೇಲೇತುವೆ ಬಳಿ ಶನಿವಾರ ನಡೆದಿದೆ.
ಕಾಮಾಕ್ಷಿಪಾಳ್ಯದ ಸವಿತಾ ಹಾಗೂ ಆಕೆಯ ಸೋದರ ಚಂದ್ರಶೇಖರ್‌ಮೇಲೆ ಆರೋಪ ಬಂದಿದ್ದು, ಈ ಘಟನೆ ಸಂಬಂಧ ಬಸ್ ಚಾಲಕ ಅಮರೇಶ್ ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನ್ನ ಇಬ್ಬರು ಮಕ್ಕಳ ಜತೆ ಸುಮನಹಳ್ಳಿ ಮೇಲೇತುವೆ ಕಡೆಯಿಂದ ಸವಿತಾ ಮನೆಗೆ ಮರಳುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಮಹಿಳೆಯಿಂದ ಚಾಲಕನ ಮೇಲೆ ಹಲ್ಲೆ ಆರೋಪ ಕೇಳಿಬಂದಿದ್ದು, ಬಿಎಂಟಿಸಿ ಬಸ್ ಡಿಪೋ 27ರ ಎಲೆಕ್ಟ್ರಿಕ್ ವಾಹನ ಕೆ 51 ಎಕೆ 4215 ಬಸ್ ಚಾಲಕ ಅಮರೇಶ್ ಮೇಲೆ ಮಹಿಳೆ ಹಲ್ಲೆ ಮಾಡಿದ್ದಾಳೆ. ಜಾಲಹಳ್ಳಿ ಕ್ರಾಸ್ನಿಂದ ಕೆಆರ್ ಮಾರ್ಕೆಟ್ ಗೆ ಬಿಎಂಟಿಸಿ ಬಸ್ ತೆರಳುತ್ತಿತ್ತು. ಬಲಭಾಗದಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಮಹಿಳೆ ಸವಿತಾ ಗಾಯಗೊಂಡಿದ್ದರು.
ಕೂಡಲೇ ಆಕೆಯ ಸಹೋದರ ಜೊತೆ ಸೇರಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಅಸ್ವಸ್ಥರಾದ ಅಮರೇಶ್ ಅನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ಹಲ್ಲೆ ನಡೆಸಿದ ಸವಿತಾ ವಿರುದ್ಧ ಪೊಲೀಸರಿಗೆ ಪ್ರತಿ ದೂರು ದಾಖಲಾಗಿದೆ.