ಬೆಂಗಳೂರು : ವಕ್ಫ್ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆಯ ಗೊಂದಲವನ್ನು ಕಾಂಗ್ರೆಸ್ ಸರ್ಕಾರ ಬಗೆಹರಿಸಬೇಕು. ರೈತರಿಗೆ ಹಾಗೂ ಹಿಂದೂಗಳಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಲ್ಲಿ ವಕ್ಫ್ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆ ಕುರಿತು ಅವರು ಮಾತನಾಡಿದರು.
ವಕ್ಫ್ ಮಂಡಳಿಯ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭೂಮಿ, ದೇವಸ್ಥಾನ, ಸ್ಮಶಾನವನ್ನು ಕಬಳಿಕೆ ಮಾಡುತ್ತಿದೆ. ಹಿಂದೂ-ಮುಸ್ಲಿಂ ಸಂಬಂಧದಲ್ಲಿ ಒಡಕು ತರಲಾಗುತ್ತಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುರಿಸುತ್ತಿದೆ. ಈ ನಡೆಯನ್ನು ಬಿಟ್ಟು, ರೈತರ ಪಹಣಿಯಲ್ಲಿ ಉಲ್ಲೇಖಿಸಿರುವ ವಕ್ಫ್ ಹೆಸರನ್ನು ತೆಗೆದುಹಾಕಬೇಕು. ಹಿಂದೆ ಮಾಡಿದ ಅಧಿಸೂಚನೆಯನ್ನು ಹಿಂಪಡೆಯಬೇಕು. ಕೇಂದ್ರ ಸರ್ಕಾರ ಮಾಡುತ್ತಿರುವ ವಕ್ಫ್ ಕಾನೂನು ತಿದ್ದುಪಡಿಗೆ ಎಲ್ಲರೂ ಬೆಂಬಲ ಸೂಚಿಸಿ ಹಿಂದೂಗಳು ಹಾಗೂ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಯಾರದ್ದೇ ಆದರೂ ಜಿಗಣೆಯಂತೆ ರೈತರ ರಕ್ತ ಹೀರುತ್ತಾರೆ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ವಕ್ಫ್ ಮಂಡಳಿಯಿಂದಾಗುತ್ತಿರುವ ಭೂ ಕಬಳಿಕೆ ಇದೇ ರೀತಿಯಾಗಿದೆ. ರಾಜ್ಯದಲ್ಲಿ ಲವ್ ಜಿಹಾದ್‌ನಂತೆಯೇ ʼಲ್ಯಾಂಡ್ ಜಿಹಾದ್ʼ ಆರಂಭವಾಗಿದೆ. ರೈತರ ಜಮೀನಿಗೆ ಬೇಲಿ ಹಾಕುವುದು, ಒಕ್ಕಲೆಬ್ಬಿಸುವುದು, ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸುವುದು, ಇತ್ಯಾದಿಗಳಿಂದಾಗಿ ಜನರು ತಾಲೂಕು ಕಚೇರಿಗೆ ಬಂದು ಪಹಣಿ ಪರಿಶೀಲಿಸುವಂತಾಗಿದೆ. ಇತಿಹಾಸ ಪ್ರಸಿದ್ಧ ದೇವಾಲಯ, ಗೋಮಾಳ, ಶಾಲೆ, ಸ್ಮಶಾನ, ಪಿತ್ರಾರ್ಜಿತ ಆಸ್ತಿ ಹಾಗೂ ಸರ್ಕಾರಿ ಜಾಗಗಳು ವಕ್ಫ್ ಮಂಡಳಿಗೆ ಸೇರುತ್ತಿದೆ. ಪಹಣಿಗಳಲ್ಲಿ ರಾತ್ರೋರಾತ್ರಿ ಬದಲಾವಣೆಯಾಗುತ್ತಿದೆ ಎಂದು ದೂರಿದರು.
ಬರಗಾಲ, ಅತಿವೃಷ್ಟಿಯಿಂದಾಗಿ ರೈತರ ಬದುಕು ಕಷ್ಟವಾಗಿದೆ. ಈಗ ವಕ್ಫ್ ಮಂಡಳಿಯು ಭೂಮಿಯೇ ನಿಂದಲ್ಲ ಎಂದು ರೈತರಿಗೆ ಹೇಳುತ್ತಿದೆ. ಇತ್ತೀಚೆಗೆ ಮೈಸೂರಿನ ಮುನೇಶ್ವರನಗರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸುಮಾರು 110 ಮನೆಗಳಿದ್ದು, ಅಲ್ಲಿ ಕುರುಬರು ವಾಸಿಸುತ್ತಿದ್ದಾರೆ. ಅವರಿಗೆ 60 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವೇ ಹಕ್ಕುಪತ್ರ ನೀಡಿ, ಬಳಿಕ ನಗರಸಭೆಯಿಂದ ಖಾತಾ ಮಾಡಿಕೊಡಲಾಗಿದೆ. ಈಗ ದಿಢೀರನೆ ಜಾಗ ವಕ್ಫ್‌ಗೆ ಸೇರಿದೆ. ಅಲ್ಲಿನ ಬಸವಣ್ಣನ ದೇವಸ್ಥಾನಕ್ಕೂ ವಕ್ಫ್ ಮಂಡಳಿ ನೋಟಿಸ್ ನೀಡಿದೆ. ಅವರೆಲ್ಲರೂ ಪ್ರತಿ ತಿಂಗಳು ಬಸ್ಸಿನಲ್ಲಿ ಬೆಂಗಳೂರಿನ ವಕ್ಫ್ ಮಂಡಳಿಗೆ ಬಂದು ವಿಚಾರಣೆ ಎದುರಿಸಬೇಕಿದೆ. ಅವರ ಮೇಲೆ ಒತ್ತಡ ಹೇರುವುದರ ಜೊತೆಗೆ, 30 ವರ್ಷ ಲೀಸ್‌ಗೆ ಪಡೆದು ಪ್ರತಿ ವರ್ಷ ಹಣ ಪಾವತಿಸಿ ಎಂದು ವಕ್ಫ್ ಹೇಳಿದೆ ಎಂದರು.
ಮುಸ್ಲಿಮ್ ವ್ಯಕ್ತಿ ಸ್ವಯಾರ್ಜಿತ ಆಸ್ತಿಯನ್ನು ದೇವರಿಗೆ ಸಮರ್ಪಿಸುವುದನ್ನು ವಕ್ಫ್ ಎಂದು ಹೇಳುತ್ತಾರೆ. ವಕ್ಫ್ ಆಸ್ತಿಯ ಸರಿಯಾದ ನಿರ್ವಹಣೆಗೆ ಬ್ರಿಟಿಷರು 1913 ರಲ್ಲಿ ವಕ್ಫ್ ಮಂಡಳಿ ರಚಿಸಿದರು. ಬಳಿಕ ಮುಸಲ್ಮಾನ್ ವಕ್ಫ್ ಕಾಯ್ದೆ ಜಾರಿ ಮಾಡಿದರು. ಭಾರತ ವಿಭಜನೆಯಾದಾಗ ಹಿಂದೂಗಳ ಜಮೀನುಗಳನ್ನು ಪಾಕಿಸ್ತಾನ ಸರ್ಕಾರ, ಸರ್ಕಾರಿ ಭೂಮಿ ಎಂದು ಬದಲಿಸಿತು. ಆದರೆ ಭಾರತದೊಳಗೆ ವಕ್ಫ್ ಆಸ್ತಿ ಎಂದು ಬದಲಿಸಲಾಯಿತು. ಇಲ್ಲಿಂದಲೇ ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಮೊದಲ ಹೆಜ್ಜೆ ಶುರುವಾಯಿತು ಎಂದರು.
ಕಾನೂನಿನಲ್ಲಿ ಬದಲಾವಣೆ ತಂದ ಕಾಂಗ್ರೆಸ್
ವಕ್ಫ್ ಮಂಡಳಿಯ ಕಾಯ್ದೆಯ ಪ್ರಕಾರ, ಒಂದು ಜಮೀನನ್ನು ತನ್ನದು ಎಂದು ಅಂದುಕೊಂಡರೆ ಅದು ವಕ್ಫ್‌ಗೆ ಸೇರುತ್ತದೆ. ನಿಜವಾದ ಮುಸ್ಲಿಂ ಮಾತ್ರ ಭೂಮಿ ದಾನ ಮಾಡಬಹುದು ಎಂದಿತ್ತು. ಆದರೆ ಪಿ.ವಿ.ನರಸಿಂಹರಾವ್ ನೇತೃತ್ವದ ಸರ್ಕಾರ ಕಾಯ್ದೆಯಲ್ಲಿ ಬದಲಾವಣೆ ತಂದು ಯಾವುದೇ ವ್ಯಕ್ತಿ ದಾನ ಮಾಡಬಹುದು ಎಂದು ಮಾಡಿದ್ದರಿಂದ ಸಮಸ್ಯೆಯಾಗಿದೆ. ಒಂದು ಬಾರಿ ಜಿಲ್ಲಾಧಿಕಾರಿ ಪ್ರಸ್ತಾವವನ್ನು ವಕ್ಫ್ ಮಂಡಳಿಗೆ ಕಳುಹಿಸಿದ ನಂತರ 6 ತಿಂಗಳೊಳಗೆ ಅದನ್ನು ಗೆಜೆಟ್ ಮಾಡಬೇಕೆಂದು ಕಾನೂನಿನಲ್ಲಿದೆ. ಹೀಗಾಗಿ ಬಿಜೆಪಿ ಸರ್ಕಾರವಿದ್ದರೂ ಈ ಕಾನೂನನ್ನು ಪಾಲಿಸಲೇಬೇಕಾಗುತ್ತದೆ ಎಂದರು.
2013 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ, ವಕ್ಫ್ ಮಂಡಳಿಯಲ್ಲಿ ಮುಸ್ಲಿಮ್ ಅಧಿಕಾರಿಯೇ ಇರಬೇಕೆಂದು ಕಾನೂನು ತಿದ್ದುಪಡಿ ಮಾಡಿತ್ತು. ಆದರೆ ಹಿಂದೂಗಳ ಮುಜರಾಯಿ ಇಲಾಖೆಯಲ್ಲಿ ಈ ರೀತಿಯ ಯಾವುದೇ ಕಾನೂನಿಲ್ಲ. ಇಂತಹ ಜಾತ್ಯತೀತತೆಯಿಂದಾಗಿ ಸಮಸ್ಯೆಯುಂಟಾಗಿದೆ. ಒಂದು ಜಮೀನನ್ನು ವಕ್ಫ್ ಮಂಡಳಿ ತನ್ನದು ಎಂದರೆ ರೈತ ತನ್ನ ಭೂಮಿ ಎಂದು ಸಾಬೀತುಪಡಿಸಬೇಕು. ಆದರೆ ವಕ್ಫ್ ಮಂಡಳಿಯ ವಿರುದ್ಧ ಯಾರಾದರೂ ದೂರು ನೀಡಿದರೆ, ವಕ್ಫ್ ಮಂಡಳಿ ದಾಖಲೆ ತೋರಿಸಬೇಕಿಲ್ಲ. ವಕ್ಫ್ ವಿರುದ್ಧ ಯಾವುದೇ ಕೋರ್ಟ್‌ಗೂ ಹೋಗಲು ಸಾಧ್ಯವಿಲ್ಲ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ರೈತರೊಬ್ಬರು ನನ್ನ ಬಳಿ ಮಾತಾಡಿದ್ದರು. ಅವರ ಆಸ್ತಿ ತಾಯಿಯ ಕಡೆಯಿಂದ ಬಂದಿತ್ತು. ಅವರು ಬ್ಯಾಂಕ್‌ಗೆ ಹೋಗಿ ಸಾಲ ಕೇಳಿದಾಗ, ಇದು ವಕ್ಫ್ ಆಸ್ತಿ ಎಂದು ಗೊತ್ತಾಗಿದೆ. ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರು ವಿಧಾನಸೌಧ, ವಿಕಾಸಸೌಧ ನಮ್ಮ ಜಾಗ ಎಂದು ಹೇಳುತ್ತಾರೆ. ಮಾಜಿ ಸಿಎಂ ಆರ್.ಗುಂಡೂರಾವ್ ಕೊಡಗಿನಲ್ಲಿ ಬಡವರಿಗೆ ಹಕ್ಕುಪತ್ರ ಹಂಚಿದ್ದು, ಈಗ ಅಲ್ಲಿಯೂ ನೋಟಿಸ್ ನೀಡಲಾಗಿದೆ. ಕೊಪ್ಪಳದಲ್ಲಿ ಪಟ್ಟಣ ಪಂಚಾಯಿತಿ ಜಾಗಕ್ಕೆ, ದಲಿತರ 10 ಎಕರೆಗೆ ನೋಟಿಸ್ ನೀಡಲಾಗಿದೆ. ನೋಟಿಸ್ ವಾಪಸ್ ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದಕ್ಕಾಗಿ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂದು ಆಗ್ರಹಿಸಿದರು.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ಇರಲಿಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಅಲ್ಲಿ ರಾಷ್ಟ್ರಧ್ವಜ ಹಾರಿಸಲು ಕ್ರಮ ವಹಿಸಿದ್ದೆ. ಎಲ್ಲ ಜಾಗಗಳನ್ನು ತಮ್ಮದೇ ಎಂದು ಹೇಳಿದರೆ ಸಮಸ್ಯೆ ಹೆಚ್ಚಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೋಟಿಸ್ ಕೊಡಲ್ಲ ಎಂದಮೇಲೂ ನೋಟಿಸ್ ನೀಡಲಾಗುತ್ತಿದೆ. ಸಚಿವ ಜಮೀರ್ ಎಲ್ಲ ಜಿಲ್ಲೆಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದಾರೆ. ಬಳಿಕ ಮುಖ್ಯಮಂತ್ರಿ ಬಳಿಗೆ ಹೋಗಿ ವಕ್ಫ್ ಆಸ್ತಿ ಲೂಟಿಯಾಗಿದೆ ಎಂದು ದೂರು ಹೇಳಿದ್ದಾರೆ. ಆಗ ಸಿಎಂ ಸಿದ್ದರಾಮಯ್ಯನವರು ಎಲ್ಲ ಕಡೆ ಹೋಗಿ ನೋಟಿಸ್ ಕೊಡಿ ಎಂದು ಹೇಳಿದ್ದಾರೆ. ಇದಕ್ಕೆ ತಕ್ಕಂತೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ ಎಂದರು.
ಒಂದು ಜಾಗ ಅರಣ್ಯ ಜಾಗವಾದರೆ ಅದು ಯಾವಾಗಲೂ ಅರಣ್ಯ ಭೂಮಿಯಾಗಿಯೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟಾದರೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅರಣ್ಯ ಜಾಗವನ್ನು ತನ್ನದು ಎಂದು ವಕ್ಫ್ ಮಂಡಳಿ ಹೇಳಿಕೊಂಡಿದೆ. ಮಂಡ್ಯದ ಚಂದಗಾಲು ಗ್ರಾಮದ 60 ವರ್ಷ ಹಳೆಯ ಸರ್ಕಾರಿ ಶಾಲೆಯ ಜಾಗಕ್ಕೆ ನೋಟಿಸ್ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕಂದವಾರ ಗ್ರಾಮದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ 19 ಗುಂಟೆಗೂ ನೋಟಿಸ್ ನೀಡಲಾಗಿದೆ. ಆ ಶಾಲೆಗೆ ನೂರಕ್ಕೂ ಹೆಚ್ಚು ವರ್ಷವಾಗಿದೆ. ಶಾಲೆಯ ಕಾಂಪೌಂಡ್ ಒಳಗೆ ಮಸೀದಿ ನಿರ್ಮಿಸಲಾಗಿದೆ. ನಾನು ಭೇಟಿ ನೀಡುತ್ತೇನೆಂದು ಗೊತ್ತಾದ ಕೂಡಲೇ ಎರಡು ದಿನದಲ್ಲಿ ಪಹಣಿಯಲ್ಲಿ ಬದಲಾವಣೆ ತರಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್ ಜಾಗವನ್ನು ವಕ್ಫ್ ಲೀಸ್‌ಗೆ ನೀಡಿದ್ದು, ಇದರ ವಿವಾದ ಬಗೆಹರಿಸಲು ಸದನ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿಯಲ್ಲಿ ಇದು ಅಕ್ರಮ ಎನ್ನಲಾಗಿದೆ. ಈ ಜಾಗದಿಂದ ವರ್ಷಕ್ಕೆ 5-6 ಕೋಟಿ ರೂ. ಆದಾಯ ಬರುತ್ತದೆ. ಇಂತಹ ಅಕ್ರಮಗಳನ್ನು ಮುಸ್ಲಿಮರೇ ಮಾಡಿದ್ದಾರೆ ಎಂದರು.
ಸಚಿವರಿಗೆ ಸವಾಲು
ಮೈಸೂರಿನಲ್ಲಿ 100 ಕುರುಬರ ಮನೆಗಳಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ನೀಡಿದ್ದು, ಈ ಕುರಿತ ದಾಖಲೆಗಳನ್ನು ನೀಡುತ್ತೇನೆ. ನಾನು ಹೇಳಿದ್ದು ಸುಳ್ಳಾದರೆ ನನಗೆ ಛೀಮಾರಿ ಹಾಕಲಿ ಎಂದು ಆರ್.ಅಶೋಕ, ಸಚಿವ ಜಮೀರ್ ಅಹ್ಮದ್ ಅವರಿಗೆ ಸವಾಲು ಹಾಕಿದರು.
ಜನಸಂಪರ್ಕ ಸಭೆ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಸಂಪರ್ಕ ಸಭೆ ಮಾಡಬೇಕೆಂದು ಹೇಳಿದಾಗ ಸಚಿವರು ಸಭೆ ಮಾಡಿದರು. ಮೊದಲೆರಡು ತಿಂಗಳು ಸಭೆ ಮಾಡಿ, ಬಳಿಕ ಯಾರೂ ಸಭೆ ಮಾಡಲಿಲ್ಲ. ಜನರ ಬಳಿ ಹೋಗಿದ್ದರೆ ವಕ್ಫ್ ಮಂಡಳಿಯ ಸಮಸ್ಯೆಯೂ ಸಚಿವರಿಗೆ ಗೊತ್ತಾಗುತ್ತಿತ್ತು ಎಂದು ಆರ್.ಅಶೋಕ ಹೇಳಿದರು.