ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಯಲಹಂಕ ನ್ಯೂಟೌನ್ನ ಬಯಲು ಬಸವೇಶ್ವರ ದೇವಸ್ಥಾನದ ಸಮೀಪದ ಫ್ಯಾಕ್ಟರಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಡಿ.9 ರಂದು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆ ನಡೆದಿತ್ತು. ಬಿಕ್ರಂ ಸಿಂಗ್ ಮತ್ತು ಚೋಟೋ ತೂರಿ ಕೊಲೆಗೀಡಾಗಿದ್ದರು. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಗೆಳತಿಗೆ ಇವರು ಮೆಸೇಜ್ ಹಾಗೂ ವಿಡಿಯೋ ಕಾಲ್ ಮಾಡುತ್ತಿದ್ದರಿಂದ ಮನನೊಂದು ಇವರಿಬ್ಬರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಲವರ್ ಗೆ ಮೆಸೇಜ್ ಮಾಡಿದಕ್ಕೆ ಮರ್ಡರ್!
ಮೊದಲ ಆರೋಪಿಯ ಗೆಳತಿಗೆ ಕೊಲೆಯಾದ ಬಿಕ್ರಂ ಸಿಂಗ್ ಆಗಾಗ ಮೆಸೇಜ್ ಹಾಗೂ ವಿಡಿಯೋ ಕಾಲ್ ಮಾಡುತ್ತಿದ್ದ. ಇವರೆಲ್ಲರೂ ಪರಿಚಯಸ್ಥರು ಹಾಗೂ ನೇಪಾಳದವರು. ರಕೂನ್ ಸಂಸ್ಥೆಯಲ್ಲಿ ಬಿಕ್ರಂ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡ್ತಿದ್ದ. ಅಲ್ಲಿಯೇ ಹಳೆಯ ಕಟ್ಟಡದಲ್ಲಿ ತನ್ನ ವಸತಿ ಪಡೆದುಕೊಂಡಿದ್ದ. ಇನ್ನೊಬ್ಬ ಚೋಟೋ ತೂರಿ ಎಂಬಾತ ವೆಂಕಟೇಶ್ವರ ಟೆಕ್ಸ್ಟೈಲ್ಸ್ನಲ್ಲಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದ.
ಬಿಕ್ರಂ ಸಿಂಗ್ ತನ್ನ ಸ್ನೇಹಿತ ಚೋಟೋ ತೂರಿಯೊಂದಿಗೆ ರಾತ್ರಿ ಚಿಕನ್ ತರಿಸಿ ಅಡುಗೆ ಮಾಡಿಕೊಂಡು ಊಟ ಮಾಡುವಾಗ ಆರೋಪಿಗಳಿಬ್ಬರು ಗಲಾಟೆ ಮಾಡಿ ಮಾರಣಾಂತಿಕವಾಗಿ ಹಲ್ಲೆಗೈದಿದ್ದಾರೆ. ಪ್ರಕರಣದಲ್ಲಿ ಇನ್ನೊಬ್ಬ ಮೃತವ್ಯಕ್ತಿ ಚೋಟೋ ತೂರಿ ಅಮಾಯಕ. ಈ ಪ್ರಕರಣಕ್ಕೂ ಅವನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಬಿಕ್ರಂ ಸಿಂಗ್ ಮೇಲಿನ ಹಲ್ಲೆ ತಡೆದು ಜಗಳ ಬಿಡಿಸಲು ಮುಂದಾಗಿದ್ದಾನೆ. ಚೋಟೋ ತೂರಿ ಬದುಕಿದ್ದರೆ ಪೊಲೀಸರಿಗೆ ವಿಷಯ ತಿಳಿಸುತ್ತಾನೆ ಮತ್ತು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗುತ್ತಾನೆ ಎಂದು ಆತನ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.