ಚಿತ್ರದುರ್ಗ : ಬಳ್ಳಾರಿಯ ಬಿಮ್ಸ್ ಹಾಗೂ ಬೆಳಗಾವಿಯಲ್ಲಿ ಬಾಣಂತಿಯ ಸಾವು ಪ್ರಕರಣ ಈಗಾಗಲೇ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು ಇದೀಗ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪ ಕೇಳಿ ಬರುತ್ತಿದೆ.
ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಗನೂರು ಹಟ್ಟಿಯ ಗ್ರಾಮದ ರೋಜಾ (25) ಮೃತ ಬಾಣಂತಿ ಎಂದು ತಿಳಿದು ಬಂದಿದೆ. ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ.ರೂಪಶ್ರೀ ಎನ್ನುವವರು ರೋಜಾಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿದ್ದರು. ಹರಿಗೆ ಬಳಿಕ ರೋಜಾ ಮನೆಗೆ ತೆರಳಿದ್ದರು. ಇವಳೆ ಹೊಲಿಗೆ ಹಾಕಿದ ಭಾಗದಲ್ಲಿ ರೋಜಾ ಗೆ ತೀವ್ರ ನೋವು ಕಾಣಿಸಿಕೊಂಡಿದೆ.
ಹೊಟ್ಟೆ ಭಾಗದಲ್ಲಿ ತೀವ್ರ ನೋವು ಹಾಗೂ ಸೋಂಕಿನಿಂದ ರೋಜಾ ಬಳಲುತ್ತಿದ್ದರು. ಅಲ್ಲದೇ ವಾಂತಿ ಭೇದಿಯಿಂದ ಕೂಡ ನೋವು ಅನುಭವಿಸುತ್ತಿದ್ದರು.ಹಾಗಾಗಿ ನಿನ್ನೆ ಜಿಲ್ಲಾ ಆಸ್ಪತ್ರೆಗೆ ಮತ್ತೆ ಬಂದು ದಾಖಲಾಗಿದ್ದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಜಾ ಗೆ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಸೂಕ್ತವಾದ ಚಿಕಿತ್ಸೆ ನೀಡಿಲ್ಲ, ಎಂದು ಮೃತ ರೋಜಾಳ ಪತಿ ವೆಂಕಟೇಶ್ ಹಾಗೂ ಸಹೋದರಿ ಶಾರದಮ್ಮ ಎನ್ನುವವರು ವೈದ್ಯರ ವಿರುದ್ಧ ಇದೀಗ ಆರೋಪ ಮಾಡುತ್ತಿದ್ದಾರೆ.
 
		



 




