ಬೆಂಗಳೂರು : ಇಂದು ನಾಡು ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವರಾದಂತಹ ಎಸ್ಎಂ ಕೃಷ್ಣ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 92 ವಯಸ್ಸಿನ ಎಸ್ಎಂ ಕೃಷ್ಣ ಅವರು ತಮ್ಮ ರಾಜಕೀಯ ಜೀವನದಲ್ಲಿ ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.
ಅದರಲ್ಲೂ ಬಹಳ ಪ್ರಮುಖವಾದಂತಹ ಯೋಜನೆಯಾದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಇವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಯಿತು. ರಾಜ್ಯದ ಹಿಂದುಳಿದ ಪ್ರದೇಶವಾದ ರಾಯಚೂರಿನಲ್ಲಿ 2001ರಲ್ಲಿ ಈ ಒಂದು ಯೋಜನೆಗೆ ಚಾಲನೆ ನೀಡಲಾಯಿತು.
ಹೌದು ರಾಜ್ಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದರು. ಈ ಮೂಲಕ ಮೊದಲ ಬಾರಿಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಾದಲ್ಲಿ ಬಿಸಿಯೂಟ ಯೋಜನೆಗೆ ಚಾಲನೆ ನೀಡಿದರು.ಸಿಎಂ ಎಸ್.ಎಂ ಕೃಷ್ಣ ಅವರಿಗೆ ಅಂದಿನ ಶಿಕ್ಷಣ ಸಚಿವ ಹೆಚ್.ವಿಶ್ವನಾಥ್, ರಾಯಚೂರು ಸಂಸದ ವೆಂಕಟೇಶ ನಾಯಕ ಅವರು ಸಾಥ್ ನೀಡಿದ್ದರು.
2001ರಲ್ಲಿ ಆಗಿನ ಸಿಎಂ ಆಗಿದ್ದ ಎಸ್‌ಎಂ ಕೃಷ್ಣ ಅವರು ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಏಳು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಆರಂಭಿಸಿದರು. ಸರ್ಕಾರಿ ಶಾಲೆಗಳ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಯೋಜನೆ ಹಾಕಿಕೊಂಡಿದ್ದರು. ಬಳಿಕ 2001ರ ನ.09 ರಂದು ಅರಕೇರಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆ ಮಾಡಿದರು.
 
		



 




