ಬಳ್ಳಾರಿ : ಬಳ್ಳಾರಿಯಲ್ಲಿ ಕೇವಲ ಒಂದೇ ತಿಂಗಳಲ್ಲಿ 6 ಜನ ಬಾಣಂತಿಯರು ಸಾವನ್ನಪ್ಪಿರುವ ಘಟನೆ ಭಾರಿ ಸದ್ದು ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಅಧಿಕಾರಿಗಳು ಬಾಣಂತಿಯರಿಗೆ ನೀಡಿದ್ದ ‘IV ಫ್ಲೂಯಿಡ್’ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ವರದಿ ಅಧಿಕಾರಿಗಳ ಕೈ ಸೇರಿದೆ.
‘ಎಂಡೋ ಟಾಕ್ಸಿನ್’ ಎಂಬ ಬ್ಯಾಕ್ಟೀರಿಯಾ ಅಂಶ ಪತ್ತೆ!
ಅಧಿಕಾರಿಗಳ ಕೈ ಸೇರಿದ IV ಫ್ಲೂಯಿಡ್ ವರದಿಯಲ್ಲಿ ಬೆಚ್ಚಿಬಿಳಿಸುವ ಮಾಹಿತಿ ಬಹಿರಂಗವಾಗಿದ್ದು, ಫ್ಲೂಯಿಡ್‌ನಲ್ಲಿ ಎಂಡೋ ಟಾಕ್ಸಿನ್ ಎಂಬ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. ಇದು ಸಾವಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾ ಎಂದು ಹೇಳಲಾಗುತ್ತದೆ. ಅಲ್ಲದೇ ಬಾಣಂತಿಯರಿಗೆ ಕೊಟ್ಟಿದ್ದ ಗ್ಲೂಕೋಸ್ ನಲ್ಲಿ ನ್ಯೂನತೆ ಕಂಡು ಬಂದಿದೆ.ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಲು ಗ್ಲೂಕೋಸ್ ಕಾರಣವಾಗಿದೆ. ಯೋಗ್ಯವಲ್ಲದ ಐವಿ ಫ್ಲೂಯಿಡ್ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದರು. ಈಗಾಗಲೇ ಹಲವು ಕ್ರಮ ಜರುಗಿಸಿದ್ದೇವೆ. ವ್ಯವಸ್ಥೆ ಸರಿಪಡಿಸಲು ಪುಡ್ ಅಂಡ್ ಡ್ರಗ್ ಕಂಟ್ರೋಲ್ ಗೆ ಐ.ಎ.ಎಸ್ ಅಧಿಕಾರಿ ನೇಮಿಸುತ್ತೇವೆ. ಮಹಿಳೆಯರ ಸಾವಿಗೆ ಕಾರಣವೇನು? ಸಾವಿನ ಕುರಿತು ಆಡಿಟ್ ಮಾಡಿಸ್ತೇವೆ. ಮಹಿಳೆಯರ ಸಾವಿನ ತನಿಖೆಗಾಗಿ ಆರೋಗ್ಯ ಇಲಾಖೆಯ ಸಮಿತಿ ರಚನೆ ಮಾಡ್ತೇವೆ ಎಂದು ಅವರು ತಿಳಿಸಿದ್ದಾರೆ.