ಬೆಂಗಳೂರು : ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ. ಹಾಗಾಗಿ ಇಂದು ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ವಿವಿಧ ಕೊರಿಯರ್ ಏಜೆನ್ಸಿ ಹಾಗೂ ಅಂಚೆ ಕಚೇರಿಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಇಂದು ಬೆಂಗಳೂರು ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ಕೊರಿಯರ್ ಏಜೆನ್ಸಿ ಮತ್ತು ಅಂಚೆ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಂಪಂಗಿ ರಾಮನಗರದ ಕೊರಿಯರ್ ಏಜೆನ್ಸಿಯಲ್ಲಿ ಸಿಸಿಬಿ ಮತ್ತು ಶ್ವಾನದಳ ಪಾರ್ಸೆಲ್ಗಳ ಪರಿಶೀಲನೆ ನಡೆಸಿತು. ಅಲ್ಲದೆ ಅಂಚೆ ಕಚೇರಿಗಳಲ್ಲೂ ಕೂಡ ಮಾದಕ ವಸ್ತುಗಳು ಪಾರ್ಸೆಲ್ ಬರುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಅಲ್ಲೂ ಕೂಡ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಈ ವಿಚಾರವಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾತನಾಡಿ, ವಿದೇಶದಿಂದ ಬರುತ್ತಿದ್ದ ಪಾರ್ಸಲ್‌ಗಳಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಹೀಗಾಗಿ, ಒಟ್ಟು ಏಳು ಕಡೆ ಪರಿಶೀಲನೆ ನಡೆಸಲಾಗಿದೆ. ಹೊಸ ವರ್ಷ ಹಿನ್ನೆಲೆ ಡ್ರಗ್ಸ್ ಹೆಚ್ಚಾಗಿ ಪೂರೈಸುತ್ತಿರುವ ಮಾಹಿತಿ ಇದೆ. ತಪ್ಪು ವಿಳಾಸ ಕೊಟ್ಟು ಕೊರಿಯರ್ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರಿಯರ್ ಕಚೇರಿ, ಅಂಚೆ ಕಚೇರಿಗಳಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.