ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರೀಕರಿಗೆ ತ್ವರಿತವಾಗಿ ಇ-ಖಾತಾ ನೀಡುವ ಸಲುವಾಗಿ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಇ-ಖಾತಾ ನೀಡಲಾಗುತ್ತಿದೆ. ಸಹಾಯಕ ಕಂದಾಯ ಅಧಿಕಾರಿಗಳ ಲಾಗಿನ್ ನಲ್ಲಿ ಬಾಕಿಯಿರುವ ಇ-ಖಾತಾ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡುವ ಸಲುವಾಗಿ, ವಲಯವಾರು ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಿಕೊಂಡು ವಾರದೊಳಗಾಗಿ ಬಾಕಿಯಿರುವ ಎಲ್ಲಾ ಅರ್ಜಿಗಳನ್ನು ವಿಲೇ ಮಾಡಲು ಸೂಚನೆ ನೀಡಿದರು.
ನಗರದಲ್ಲಿ ಇದುವರೆಗೆ ಇ-ಖಾತಾ ಪಡೆಯಲು 72.96 ಲಕ್ಷ ಭೇಟಿ ನೀಡಿದ್ದು, 6 ಲಕ್ಷ ಕರಡು ಇ-ಖಾತಾ ಡೌನ್ಲೋಡ್ ಮಾಡಿಕೊಂಡಿತ್ತಾರೆ. ಇದುವರೆಗೆ 21369 ಅಂತಿಮ ಇ-ಖಾತಾ ನೀಡಲಾಗಿದ್ದು, ಸಹಾಯಕ ಕಂದಾಯ ಅಧಿಕಾರಿಗಳ ಲಾಗಿನ್ ನಲ್ಲಿ ಸುಮಾರು 14000 ಇ-ಖಾತಾ ಅರ್ಜಿಗಳು ಬಾಕಿಯಿದೆ. ಅವುಗಳನ್ನು ಶೀಘ್ರ ವಿಲೇವಾರಿ ಮಾಡಲು ಸೂಚಿಸಿದರು.
ಪ್ರತಿ ಬುಧವಾರ ಕಂದಾಯ ಅದಾಲತ್:
ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್ ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪ್ರತಿ ಬುದವಾರ ವಾರ್ಡ್ ಕಛೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಕುಂದು-ಕೊರತೆಗಳ ಸಭೆ ನಡೆಯಲಿದೆ. ಅದಲ್ಲದೆ ಕಂದಾಯ ವಿಭಾಗದ ಅಧಿಕಾರಿಗಳ ಕಛೇರಿಗಳಲ್ಲಿ ಪ್ರತಿ ಬುಧವಾರ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ “ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆಸ್ತಿ ತೆರಿಗೆ ಸಂಗ್ರಹ:
ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ 4250 ಹೆಚ್ಚು ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 5200 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ನಿಗದಿತ ಗುರಿ ಸಾಧಿಸಲು ಆಯಾ ವಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂದು ಬಾಕಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಸೂಚನೆ ನೀಡಿದರು.
ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ:
ಫೆಂಗಲ್ ಚಂಡಮಾರುತದ ಪರಿಣಾಮ ನಗರದಲ್ಲಿ ಮಳೆಯಾಗುತ್ತಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೋಲ್ಡ್ ಮಿಕ್ಸ್ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆ ನಿಂತ ಕೂಡಲೆ ಹಾಟ್ ಮಿಕ್ಸ್ ಪ್ಲಾಂಟ್ ನಿಂದ ಹೆಚ್ಚು ಹೆಚ್ಚು ಡಾಂಬರನ್ನು ಪಡೆದು ಶೀಘ್ರ ಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದರು.
ಮಳೆಗೆ ಮುಂಜಾಗ್ರತಾ ಕ್ರಮ:
ಫೆಂಗಲ್ ಚಂಡಮಾರುತದ ಪರಿಣಾಮ ಗಾಳಿ ಹೆಚ್ಚಿರಲಿದ್ದು, ಮಳೆ ಅಲ್ಪ ಪ್ರಮಾಣದಲ್ಲಿ ಬರದಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಎಲ್ಲಾ ವಲಯಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸನ್ನದ್ಧರಾಗಿರಬೇಕು. ಅಲ್ಲದೆ ಜೆಸಿಬಿಗಳ ಮೂಲಕ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳನ್ನು ತೆರವುಗೊಳಿಸುತ್ತಿರಬೇಕು. ಪ್ರಮುಖ ರಸ್ತೆಗಳ ಸೈಡ್ ಡ್ರೈನ್‌ಗಳಿಗೆ ಸರಾಗವಾಗಿ ನೀಡು ಹೋಗುವಂತೆ ಸ್ವಚ್ಛಗೊಳಿಸಬೇಕು. ಜೊತೆಗೆ ಮರ ತೆರವು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಸತೀಶ್, ಅರ್ಚನಾ, ರಮೇಶ್, ಗಿರೀಶ್, ಕರೀಗೌಡ, ರಮ್ಯಾ, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
BREAKING: ಬೆಂಗಳೂರಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆಯಿಲ್ಲ- DC ಜಗದೀಶ್ ಮಾಹಿತಿ | School Holiday