ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಇಂದಿರಾನಗರದ ಅಪಾರ್ಟ್ಮೆಂಟ್ನಲ್ಲಿ ಅಸ್ಸಾಂ ಮೂಲದ ಯುವತಿ ಮಾಯಾ ಗೊಗಾಯ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಪಟ್ಟಂತೆ ಕೊಲೆ ಆರೋಪಿ ಆರವ್ ಹನೋಯ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೌದು ಮಾಯಾಳನ್ನು ಆತನ ಪ್ರಿಯಕರ ಆರವ್ ಅಪಾರ್ಟ್ಮೆಂಟ್ ನಲ್ಲಿ ಚಾಕುವಿನಿಂದ ಭೀಕರವಾಗಿ ಕೊಂದು ಅಲ್ಲಿಂದ ಪರಾರಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಇದೀಗ ಹೊರ ರಾಜ್ಯದಲ್ಲಿ ಆತನ ಹೆಡೆಮುರಿ ಕಟ್ಟಿ ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದು, ವಿಚಾರಣೆಯ ಬಳಿಕವಷ್ಟೇ ಮಾಯಾಳ ಹತ್ಯೆಗೆ ಏನು ಕಾರಣ ಎನ್ನುವುದು ತಿಳಿಯಲಿದೆ .
ಕಳೆದ ಕೆಲ ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ.ಇದೇ 23 ರಂದು ಇಂದಿರಾನಗರ ಸರ್ವೀಸ್ ಅಪಾರ್ಟ್ಮೆಂಟ್ಗೆ ಬಂದಿದ್ದರು. ಶನಿವಾರದಿಂದ ಅಪಾರ್ಟ್ಮೆಂಟ್ನಲ್ಲಿದ್ದ ಆರವ್ ಹನೋಯ್, ಮೂರು ದಿನಗಳ ಅಂತರದಲ್ಲಿ ಮಾಯಾ ಗೊಗಾಯ್ಳನ್ನು ಕೊಲೆ ಮಾಡಿದ್ದು, ಬಳಿಕ ಮಂಗಳವಾರ ಬೆಳಗ್ಗೆ 8.19 ಕ್ಕೆ ರೂಂನಿಂದ ಹೊರ ಹೋಗಿದ್ದಾನೆ ಎಂದು ತಿಳಿದು ಬಂದಿತ್ತು.
ಇನ್ನು ಮಾಯಾ ಗೊಗಾಯ್ಳನ್ನು ಕೊಲೆ ಮಾಡಿದ ಬಳಿಕ ಹಂತಕ ಆರವ್ ಹನೋಯ್ ಕೋಣೆಯಿಂದ ಗಾಬರಿಯಲ್ಲೇ ಹೊರಟಿದ್ದು, ಹೋಟೆಲ್ನಲ್ಲಿ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೂ ಹೋಗಿದ್ದಾನೆ. ರೈಲು ನಿಲ್ದಾಣ ಸಮೀಪ ಹೋಗ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.ಆರೋಪಿಯನ್ನು ವಶಕ್ಕೆ ಪಡೆದಿರುವ ಇಂದಿರಾ ನಗರ ಪೊಲೀಸರು ಆತನನ್ನು ಬೆಂಗಳೂರಿಗೆ ಕರೆತರುತ್ತಿದ್ದು, ತನಿಖೆ ಮುಂದುವರಿದಂತೆ ಕೊಲೆಗೆ ಕಾರಣ ಏನು ಅನ್ನೋದು ಬಯಲಾಗಲಿದೆ.