ಶಿವಮೊಗ್ಗ : ಕೆ.ಎಫ್.ಡಿ ಲಸಿಕೆ 2026ಕ್ಕೆ ಲಭ್ಯವಾಗಲಿದ್ದು, ಅಲ್ಲಿಯವರೆಗು ಮಂಗನ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ಸಾವುಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗನ ಕಾಯಿಲೆ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ನಿನ್ನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದು,ಪ್ರತಿ ವರ್ಷ ಜನವರಿ ತಿಂಗಳಿನಿಂದ ಆರಂಭವಾಗಿ ಬೇಸಿಗೆವರೆಗೂ ಈ ಭಾಗದಲ್ಲಿ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ಈ ಬಾರಿ ಆರಂಭದಲ್ಲೇ ಹೆಚ್ಚು ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆ.ಎಫ್.ಡಿ ಲಸಿಕೆ 2026ಕ್ಕೆ ಲಭ್ಯವಾಗಲಿದ್ದು, ಅಲ್ಲಿಯವರೆಗು ಮಂಗನ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ಸಾವುಗಳಾಗದಂತೆ ಎಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕೆಯಾಗಿ ಮಂಗನ ಕಾಯಿಲೆ ಇರುವ ಪ್ರದೇಶಗಳಲ್ಲಿ ಯಾರಿಗೆ ಜ್ವರ ಬಂದರು ಕಡ್ಡಾಯವಾಗಿ ಪರೀಕ್ಷಿಸಿ ಚಿಕಿತ್ಸೆ ಆರಂಭಿಸಬೇಕು. DEPA ತೈಲ ಅಗತ್ಯ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವೇಳೆ ಒಂದು ಲಕ್ಷ DEPA ತೈಲ ದಾಸ್ತಾನಿದ್ದು, ಇನ್ನೂ ಒಂದೂವರೆ ಲಕ್ಷ ಬಾಟಲ್ ಸರಬರಾಜಿಗೆ ಔಷಧಿ ಸರಬರಾಜು ನಿಗಮಕ್ಕೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಶಿರಸಿಯ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ್, ಸಾಗರ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.