ಬೆಂಗಳೂರು : ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಹಾಗಾಗಿ 5 ಗ್ಯಾರಂಟಿ ಯೋಜನೆಗಳಲ್ಲಿ ಯಾವುದಾದರು ಎರಡು ನಿಲ್ಲಿಸಿ ಎಂದು ಶಾಸಕ ಗವಿಯಪ್ಪ ಹೇಳಿಕೆ ನೀಡಿದ್ದರು. ಈ ಒಂದು ಹೇಳಿಕೆಯನ್ನ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ನಾನು ಕೂಡ ಅನುದಾನ ಕೇಳುತ್ತೇನೆ ಅದರಲ್ಲಿ ತಪ್ಪೇನಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೆರಡು ಗ್ಯಾರಂಟಿ ನಿಲ್ಲಿಸಬೇಕು ಎಂದು ಗವಿಯಪ್ಪ ಹೇಳಿಕೆ ವಿಚಾರವಾಗಿ ಅವರವರ ಅಭಿಪ್ರಾಯ ಹೇಳುತ್ತಾರೆ. ಗ್ಯಾರಂಟಿ ಬಗ್ಗೆ ರಾಜ್ಯ ಸರ್ಕಾರ ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದ್ದು, ಗ್ಯಾರಂಟಿ ಯೋಜನೆ ನಂಬಿಕೊಂಡೆ ಜನ ನಮಗೆ ಮತ ಹಾಕಿದ್ದಾರೆ.
ಶಾಸಕರು ಅನುದಾನ ಕೇಳಲಿ ಅದರಲ್ಲಿ ತಪ್ಪಿಲ್ಲ. ಈಗ ನಾನು ಕೂಡ ಅನುದಾನವನ್ನು ಕೇಳುತ್ತೇನೆ ಅದು ತಪ್ಪಾ? ಅನೇಕ ಕಾರ್ಯಕ್ರಮಗಳನ್ನು ಇಂದಿನ ಸರ್ಕಾರ ಬಿಟ್ಟು ಹೋಗಿತ್ತು. ಅನುದಾನಕ್ಕೆ ಯಾವುದೇ ತೊಂದರೆ ಆಗಲ್ಲ ಈಗಾಗಲೇ ಬ್ಯಾಲೆನ್ಸ್ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಬೋವಿ ನಿಗಮ ಅಕ್ರಮದ ಬಗ್ಗೆ ಸಿಐಡಿ ಹಾಗೂ ಎಸ್ಐಟಿ ತನಿಖೆ ಮಾಡುತ್ತಿದೆ. ನಿಮಗೆ ಏನು ಮಾಹಿತಿ ಇದೆಯೋ ನನಗೂ ಕೂಡ ಅಷ್ಟೇ ಮಾಹಿತಿ ಇದೆ. ಸಿಐಡಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿರುವಂತಹ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಈ ಬಗ್ಗೆ ಹಿರಿಯ ಅಧಿಕಾರಿಗಳ ಮೂಲಕ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.