ಬಳ್ಳಾರಿ : ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಒಬ್ಬರು ಸಾವನ್ನಪ್ಪಿದ್ದರು. ಇದೀಗ ಇಂದು ಕೂಡ ಬಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವವಾಗಿ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿನಲ್ಲಿ ಬಳ್ಳಾರಿಯಲ್ಲಿ ಇದು ಐದನೇ ಪ್ರಕರಣವಾಗಿದೆ.
ಹೌದು ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮಹಾಲಕ್ಷ್ಮಿ (20) ಸಾವನನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಭಾನುವಾರ ಬಿಮ್ಸ್ ಆಸ್ಪತ್ರೆಗೆ ಮಹಾಲಕ್ಷ್ಮಿ ಹೆರಿಗೆಗೆ ದಾಖಲಾಗಿದ್ದಳು. ಹೆರಿಗೆ ಬಳಿಕ ರಕ್ತಸ್ರಾವಾಗಿ ಬಾಣಂತಿಯ ಮಹಾಲಕ್ಷ್ಮಿ ಸಾವನ್ನಪ್ಪಿದ್ದಾಳೆ. ಭಾನುವಾರ ಬಿಮ್ಸ್ ಆಸ್ಪತ್ರೆಯಲ್ಲಿ ಮಹಾಲಕ್ಷ್ಮಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಮಹಾಲಕ್ಷ್ಮಿ ಮೂಲತಃ ಕೂಡ್ಲಿಗಿ ತಾಲೂಕಿನ ಸಿ ಎಸ್ ಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಮಹಾಲಕ್ಷ್ಮಿ ಆಸ್ಪತ್ರೆಗೆ ಬರುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೆಮ್ಮು ಇತರೆ ಕಾಯಿಲೆಯಿಂದ ಇಂದು ಮಹಾಲಕ್ಷ್ಮಿ ಮೃತಪಟ್ಟಿದ್ದಾಳೆ ಎಂದು ಬಾಣಂತಿ ಸಾವಿನ ಬಗ್ಗೆ ಭೀಮ್ಸ್ ನಿರ್ದೇಶಕ ಡಾಕ್ಟರ್ ಗಂಗಾಧರ ಗೌಡ ಸ್ಪಷ್ಟನೆ ನೀಡಿದರು. ಆಸ್ಪತ್ರೆಯ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದುವರೆಗೂ 5 ಬಾಣಂತಿಯರ ಸಾವು!
ಇದುವರೆಗೂ ಬಳ್ಳಾರಿಯಲಿ ಐವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಕಳೆದ ನವೆಂಬರ್ 9ರಂದು ಜಿಲ್ಲಾಸ್ಪತ್ರೆಯಲ್ಲಿ 18 ಗರ್ಭಿಣಿಯರಿಗೆ ಹೆರಿಗೆ ಮಾಡಲಾಗಿತ್ತು. ಈ ವೇಳೆ 7 ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ನಂದಿನಿ, ಲಲಿತಮ್ಮ ಅನ್ನುವ ಬಾಣಂತಿಯರು ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಉಳಿದ ಐವರಿಗೆ ವಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬಳಿಕ ನವೆಂಬರ್ 13ರಂದು ರೋಜಮ್ಮ ಎನ್ನುವ ಬಾಣಂತಿಯ ಸಾವಾಗಿದ್ದು, ನಂತರ ನವೆಂಬರ್ 25 ರಂದು ಮುಸ್ಕಾನ್ ಎನ್ನುವ ಬಾಣಂತಿಯ ಸಾವಾಗಿದೆ. ಇದೀಗ ಇಂದು ಬಿಮ್ಸ್ ನಲ್ಲಿ ಮಹಾಲಕ್ಷ್ಮಿ ಎನ್ನುವ ಬಾಣಂತಿಯ ಸಾವಾಗಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.