ಶಿವಮೊಗ್ಗ: ಕಳೆದ ಹತ್ತಾರು ವರ್ಷಗಳಿಂದ ರಾಜ್ಯ ಆರೋಗ್ಯ ಇಲಾಖೆಯಲ್ಲಿ ( Karnataka Health Departmetn ) ಎನ್ ಹೆಚ್ ಎಂ ಯೋಜನೆಯ ಅಡಿಯಲ್ಲಿ ಗುತ್ತಿಗೆ ನೌಕರರಾಗಿ ಸಾವಿರಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕೆಲಸ ಖಾಯಂ ಆಗೋ ನಿರೀಕ್ಷೆಯಲ್ಲಿ ಕಡಿಮೆ ವೇತನದಲ್ಲೂ ಸರ್ಕಾರಿ ನೌಕರರ ಸಮಾನವಾಗಿಯೇ ದುಡಿಯುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಲವೆಡೆ ವೈದ್ಯರು ಅಲಭ್ಯದ ನಡುವೆ ರೋಗಿಗಳಿಗೆ ಸೇವೆ ಸಿಗುತ್ತಿರುವುದೇ ಎನ್ ಹೆಚ್ ಎಂ ಗುತ್ತಿಗೆ ಸ್ಟಾಫ್ ನರ್ಸ್ ಗಳಿಂದಾಗಿದೆ. ಹೀಗೆ ಇರುವಾಗ ಖಾಯಂ ನಿರೀಕ್ಷೆಯಲ್ಲಿದ್ದಂತ ನೌಕರರಿಗೆ ಸ್ಕೀಂ ಮುಗಿದ ಮೇಲೆ ನೋಡೋಣ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.
ಶಿವಮೊಗ್ಗದ ಸಾಗರ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿದಂತ ಅವರು, ತಾಲ್ಲೂಕು, ಜಿಲ್ಲೆ, ರಾಜ್ಯದಲ್ಲಿನ ಮಂಗನಕಾಯಿಲೆ ಬಗ್ಗೆ ಮಾಹಿತಿಯನ್ನು ಪಡೆದರು. ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಈ ವೇಳೆ ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ( Health Minister Dinesh Gundu Rao ) ಅವರಿಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎನ್ ಹೆಚ್ ಎಂ ಗುತ್ತಿಗೆ ನೌಕರರ ( NHM contract employee ) ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಿತ್ತು. ಅದರಂತೆ ಮೂರು ತಿಂಗಳ ವೇತನ ಕೂಡ ನೀಡಲಾಗಿತ್ತು. ಈಗ ಕೊಡ್ತಿಲ್ಲ ಎಂದಾಗ ನಾವು ವಾರ್ಷಿಕ ಶೇ.5ರಷ್ಟು ವೇತನ ಹೆಚ್ಚಳ ಮಾಡಿ, ನೀಡಲಾಗುತ್ತಿದೆ ಎಂದರು.
ಇನ್ನೂ ವಿಧಾನಸಭಾ ಚುನಾವಣೆಗೆ ಮುನ್ನ ಫ್ರೀಡಂ ಪಾರ್ಕ್ ನಲ್ಲಿ ಖಾಯಂಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರು ಅನಿರ್ಧಿಷ್ಟಾವದಿ ಮುಷ್ಕರ ನಡೆಸುತ್ತಿದ್ದರು. ಆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಂತ ಡಿ.ಕೆ ಶಿವಕುಮಾರ್ ( DK Shivakumar ) ನಿಮ್ಮನ್ನು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಖಾಯಂ ಮಾಡೋದಾಗಿ ಘೋಷಿಸಿದ್ದರು. ಅದರಂತೆ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲೂ ತಿಳಿಸಲಾಗಿತ್ತು. ಎನ್ ಹೆಚ್ ಎಂ ಗುತ್ತಿಗೆ ನೌಕರರನ್ನು ಖಾಯಂ ಮಾಡ್ತೀರ ಅಂತ ಪ್ರಶ್ನಿಸಲಾಯಿತು.
ಈ ಪ್ರಶ್ನೆಗೆ ಉತ್ತರಿಸಿದಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇನ್ನೂ ಒಂದೂವರೆ ವರ್ಷ ನಮ್ಮ ಸರ್ಕಾರಕ್ಕೆ ಆಗಿದೆ. ಈಗಲೇ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತ ಬೇಡಿಕೆ ಈಡೇರಿಸೋಕಾಗಲ್ಲ. ಮುಂದೆ ನೋಡೋಣ. ಎನ್ ಹೆಚ್ ಎಂ ಸ್ಕೀಂ ಇನ್ನೂ ಮುಗಿದಿಲ್ಲ. ಮುಗಿದಾಗ ಆ ಬಗ್ಗೆ ನೋಡೋಣ ಎಂದರು. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಎನ್ ಹೆಚ್ ಎಂ ಗುತ್ತಿಗೆ ನೌಕರರನ್ನು ಸದ್ಯಕ್ಕೆ ಖಾಯಂ ಮಾಡೋದಿಲ್ಲ ಎಂಬ ಸುಳಿವು ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು