ಬೆಂಗಳೂರು: ಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ಕಾನೂನು ಪದವೀಧರರಿಂದ ನ್ಯಾಯಾಂಗ ಆಡಳಿತದಲ್ಲಿ 4 ವರ್ಷಗಳ ಅವಧಿಯ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾನೂನು ತರಬೇತಿ ಪಡೆಯುವ ಅಭ್ಯರ್ಥಿಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಗಳಲ್ಲಿ ಯಾವುದಾದರೊಂದು ಸಮುದಾಯಕ್ಕೆ ಸೇರಿದ್ದು ರಾಜ್ಯದ ನಿವಾಸಿಯಾಗಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ.3,50,000/-ಕ್ಕೆ ಮೀರಿರಬಾರದು. ಅಭ್ಯರ್ಥಿಯು ಬಾರ್ ಕೌನ್ಸಿಲ್ ನಲ್ಲಿ ಹೆಸರನ್ನು ನೊಂದಾಯಿಸಿರಬೇಕು. ಅಭ್ಯರ್ಥಿಯು ಕಾನೂನು ಪದವೀಧರರಾಗಿದ್ದು, ಈ ತರಬೇತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 30 ವರ್ಷಗಳೊಳಗೆ ಇರಬೇಕು. ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ರೂ.5000/- ಗಳ ತರಬೇತಿ ಭತ್ಯೆಯನ್ನು ನೀಡಲಾಗುವುದು.
ಅಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ನಿಗದಿತ ಅವಧಿಯೊಳಗೆ ಕಚೇರಿ ವೇಳೆಯಲ್ಲಿ ಪಡೆದು, ಭರ್ತಿ ಮಾಡಲಾದ ಅರ್ಜಿಯೊಂದಿಗೆ ಅವಶ್ಯಕ ಮಾಹಿತಿಗಳಾದ ಕಾನೂನು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳ ದೃಢೀಕರಣ ಪ್ರತಿ, ಜನ್ಮ ದಿನಾಂಕದ ಆಧಾರಕ್ಕಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಟಿ.ಸಿ ದೃಢೀಕೃತ ಪ್ರತಿ ಹಾಗೂ ಆಹಾರ ಪಡಿತರ ಚೀಟಿ ಅಥವಾ ತಹಶೀಲ್ದಾರ್ ರವರಿಂದ ಪಡೆದ ವಾಸಸ್ಥಳದ ದೃಢೀಕೃತ ಪತ್ರದೊಂದಿಗೆ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, 1ನೇ ಮಹಡಿ, ಪೋಡಿಯಂ ಬ್ಲಾಕ್, ವಿ.ವಿ ಗೋಪುರ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು 560 001 ಇಲ್ಲಿ ಡಿಸೆಂಬರ್ 20ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-22866718 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.