ಬೆಂಗಳೂರು : ಅನರ್ಹರು ಬಿಪಿಎಲ್ ಕಾರ್ಡುಗಳನ್ನು ಪಡೆದಿದ್ದರಿಂದ ರಾಜ್ಯ ಸರ್ಕಾರ ಈ ಒಂದು ಬಿಪಿಎಲ್ ಕಾರ್ಡ್ ಪರಿಷ್ಕರಣೆಯಲ್ಲಿ ಅರ್ಹ ಫಲಾನುಭವಿಗಳ ಕಾರ್ಡುಗಳನ್ನು ಕೂಡ ರದ್ದು ಮಾಡಿತ್ತು. ಇದೀಗ ಸರ್ಕಾರ ಒಂದು ವಾರದಲ್ಲಿ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ಗಳನ್ನು ವಿತರಿಸುವ ಕಾರ್ಯ ಭರದಿಂದ ಸಾಗಿದ್ದು, ಡಿಸೆಂಬರ್ ನಿಂದ ಬಿಪಿಎಲ್ ಕಾರ್ಡ್ ದಾರರಿಗೆ ರೇಷನ್ ಸಿಗಲಿದೆ.
ಇನ್ನು ಬಿಪಿಎಲ್ ಕಾರ್ಡ್ ಮರು ಸ್ಥಾಪನೆಗೆ ಈ ಹಿಂದೆ ನವೆಂಬರ್ 25 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಎಪಿಎಲ್ ನಿಂದ ಬಿಪಿಎಲ್ಗೆ ಬದಲಾಯಿಸಲು ಅಧಿಕಾರಿಗಳಿಗೆ ಸಾಕಷ್ಟು ಕಾಲಾವಕಾಶ ಅಗತ್ಯವಿರುವ ಕಾರಣ ನವೆಂಬರ್ 28ರವರೆಗೆ ಅವಕಾಶ ನೀಡಲಾಗದೆ. ಈಗಾಗಲೇ ರಾಜ್ಯದಲ್ಲಿ ಶೇ 90 ರಷ್ಟು ಕಾರ್ಡ್ಗಳನ್ನು ಎಪಿಎಲ್ನಿಂದ ಬಿಪಿಎಲ್ ಮರುಸ್ಥಾಪನೆ ಮಾಡಲಾಗಿದೆ. ರಾಜಧಾನಿಯಲ್ಲಿ ಶೇ 95 ರಷ್ಟು ಬಿಪಿಎಲ್ ಕಾರ್ಡ್ ಮರುಸ್ಥಾಪನೆಯಾಗಿದೆ. ಉಳಿದ ಕಾರ್ಡ್ ಸರಿಪಡಿಸಲು ಇನ್ನೆರಡು ದಿನ ಕಾಲವಕಾಶ ಇದೆ.
ರದ್ದಾದ ಎಲ್ಲ ಬಿಪಿಎಲ್ ಕಾರ್ಡ್ಗಳ ಮರು ಪರಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಅಮಾನತಿನಲ್ಲಿಟ್ಟಿರುವ ಪಡಿತರ ಚೀಟಿಗಳ ಮರುಸ್ಥಾಪನೆ ಕಾರ್ಯವನ್ನು ಮಾಡಲು ಜಂಟಿ ನಿರ್ದೇಶಕರು, ಉಪ ನಿರ್ದೇಶಕರ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ.NIC ತಂತ್ರಾಂಶ ಎಕ್ಸಪರ್ಟ್ಗಳ ಜೊತೆ ಆಹಾರ ಇಲಾಖೆ ಸಭೆ ನಡೆಸಿದ್ದು, ಬಿಪಿಎಲ್ ಕಾರ್ಡ್ ಮರು ಪರಶೀಲನೆಗೆ ಇದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದೆ. ಜತೆಗೆ, ಮುಂದಿನ ತಿಂಗಳಿಂದ ಪಡಿತರ ನೀಡಲು ಬೇಕಾದ ಎಲ್ಲ ವವಸ್ಥೆಗಳನ್ನು ಮಾಡಿಕೊಂಡಿದೆ.
ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ, ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ತಿಂಗಳು ಅಂದರೆ ಡಿಸೆಂಬರ್ ನಿಂದ ಎಲ್ಲಾ ಬಿಪಿಎಲ್ ಅರ್ಹ ಫಲಾನುಭವಿಗಳಿಗೆ ರೇಷನ್ ದೊರಕಲಿದೆ. ಅಕಸ್ಮಾತ್ ಬಡ ಕುಟುಂಬದ ಅರ್ಹ ಫಲಾನುಭವಿಗಳ ಕಾರ್ಡುಗಳನ್ನು ರದ್ದು ಮಾಡಿದರೆ, ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.