ಮೈಸೂರು : ಚನ್ನಪಟ್ಟಣ ಉಪಚುನಾವಣೆಯ ಪ್ರಚಾರಕ್ಕೆ ಎಚ್ ಡಿ ದೇವೇಗೌಡರು ಜೆಡಿಎಸ್ ಶಾಸಕ ಜಿಟಿ ದೇವೇಗೌಡರಿಗೆ ಕರೆ ಮಾಡಿ ಕರೆದರೂ ಕೂಡ ಅವರು ಬಂದಿಲ್ಲ ಎಂದು ಶಾಸಕ ಸಾರಾ ಮಹೇಶ್ ತಿಳಿಸಿದ್ದರು. ಇವರ ಈ ಒಂದು ಹೇಳಿಕೆಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಿರುಗೇಟು ನೀಡಿದ್ದು, ಉಪಚುನಾವಣೆಯ ಪ್ರಚಾರಕ್ಕೆ ಎಚ್ ಡಿ ದೇವೇಗೌಡರು ನನ್ನನ್ನು ಕರೆದೇ ಇಲ್ಲ. ಒಂದು ವೇಳೆ ಕರೆದಿದ್ದೇನೆ ಎಂದು ಹೇಳಿದರೆ ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರಕ್ಕೆ ದೇವೇಗೌಡರು ನನ್ನನ್ನು ಕರೆದಿಲ್ಲ. ಸಾರ ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿ ಚಾಮುಂಡಿ ಬೆಟ್ಟಕ್ಕೆ ಬಾ ಅಂದರೆ ಆಗುತ್ತಾ? ಈ ಹಿಂದೆ ವಿಶ್ವನಾಥ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಹೋದರು ಅವರ ಕಥೆ ಏನಾಯ್ತು? ಆ ಕಥೆ ನನಗೂ ಆಗಬೇಕಾ?
ನಾನು ಹೇಳುತ್ತಿರುವುದೇ ಸತ್ಯ. ನಾನು ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳುತ್ತೇನೆ. ಒಂದು ಬಾರಿ ಯಾವುದೋ ತಪ್ಪು ಮಾಡಿದ್ದೆ. ನಾನು ಯಾವುದಕ್ಕೂ ಹೆದರುವುದಿಲ್ಲ ಸುಳ್ಳು ಹೇಳುವುದಿಲ್ಲ. ಸಾರಾ ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಯಾರೋ ಒಬ್ಬರ ಹೆಸರು ಇಟ್ಟುಕೊಂಡು ರಾಜಕಾರಣ ಮಾಡಲ್ಲ ಎಂದರು.
ಯಾರು ಇಲ್ಲದಿದ್ದರೂ ನಾನು ರಾಜಕಾರಣ ಮಾಡಿದ್ದೇನೆ. ರಾಜಕೀಯ ಮಾಡುವುದು ನನಗೆ ಬಹಳ ಚೆನ್ನಾಗಿ ಗೊತ್ತಿದೆ ನನ್ನನ್ನು ಯಾರು ಸಹ ಯಾವುದೇ ಪಕ್ಷಕ್ಕೂ ಕರೆತಂದಿಲ್ಲ. ನಾನು ಸ್ವಂತವಾಗಿ ರಾಜಕಾರಣ ಮಾಡಿದವನು ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಿಳಿಸಿದರು.