ಮಂಡ್ಯ : ಸಾಮಾನ್ಯವಾಗಿ ಚಿನ್ನಾಭರಣ ಆಗಿರಲಿ ಅಥವಾ ನಗದು ಹಣವಾಗಿರಲಿ ಯಾವುದೇ ವಸ್ತುಗಳನ್ನು ಕಳ್ಳರು ಕದ್ದರು ಸಹ, ಕಳೆದುಕೊಂಡವರು ಅದರ ಮೇಲಿನ ಆಸೆ ಬಿಡಬೇಕು. ಆದರೆ ಮಂಡ್ಯದಲ್ಲಿ ವಿಚಿತ್ರವಾದಂತಹ ಘಟನೆ ನಡೆದಿದ್ದು, ಚಿನ್ನಾಭರಣ ಕದ್ದಂತಹ ಕಳ್ಳರು ಪ್ರಾಮಾಣಿಕವಾಗಿ ಎಲ್ಲಿಂದ ಕದ್ದರೋ ಅಲ್ಲಿಯೇ ಮರಳಿ ಇಟ್ಟಿರುವ ಘಟನೆ ನಡೆದಿದೆ.
ಹೌದು ರಾಗಿಮುದ್ದನಹಳ್ಳಿ ಗ್ರಾಮದ ಸಿದ್ದೇಗೌಡ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆ ದೇವರ ಪೂಜೆಗೆ ಹೋಗಿದ್ದ ವೇಳೆ ಕಳ್ಳತನ ನಡೆದಿತ್ತು. ಮನೆಯ ಹೆಂಚುಗಳನ್ನ ತೆಗೆದು ಒಳನುಗ್ಗಿದ್ದ ಕಳ್ಳರು, ಬೀರುವನ್ನ ಹೊಡೆದು ಕಳ್ಳತನ ಮಾಡಿದ್ದರು. 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂ ಮೂರು ಜೊತೆ ಓಲೆಗಳನ್ನು ಕದಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಗೆ ಸಿದ್ದೇಗೌಡ ದೂರು ನೀಡಿದ್ದರು.
ಯಾವಾಗ ಪೊಲೀಸರಿಗೆ ದೂರು ಹೋಯಿತೋ ಕೂಡಲೇ ಪೊಲೀಸರಿಗೆ ಹೆದರಿ ಕದ್ದ ಚಿನ್ನಾಭರಣಗಳನ್ನು ಕಳ್ಳರು,ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಕದ್ದ ಚಿನ್ನಾಭರಣವನ್ನು ಮನೆಯ ಮುಂಭಾಗದ ಜಗಲಿ ಮೇಲೆ ಇಟ್ಟುಹೋಗಿದ್ದಾರೆ. ಇತ್ತ ಚಿನ್ನಾಭರಣ ವಾಪಾಸ್ ಸಿಗುತ್ತಿದ್ದಂತೆ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.








