ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವಂತ ರೈತರಿಗೆ ಸಾಗುವಳಿ ಪತ್ರವನ್ನು ನೀಡುವ ಸಂಬಂಧ ಡೇಟ್ ಫಿಕ್ಸ್ ಆಗಿದೆ. ಬಗರ್ ಹುಕುಂ ಸಾಗುವಳಿದಾರರ ಅರ್ಜಿಯನ್ನು ನವೆಂಬರ್.26ರೊಳಗೆ ಕ್ಲಿಯರ್ ಮಾಡಿ, ಡಿಸೆಂಬರ್ ಮೊದಲ ವಾರದಲ್ಲಿ ಡಿಜಿಟಲ್ ಸಾಗುವಳಿ ಭೂ ಮಂಜೂರಾತಿ ಪತ್ರ ವಿತರಣೆಗೆ ನಿರ್ಧರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ನವೆಂಬರ್ ತಿಂಗಳ 25 ರ ಒಳಗೆ ತಹಶೀಲ್ದಾರರು ಅರ್ಹ-ಅನರ್ಹ ಅರ್ಜಿಗಳನ್ನು ವಿಂಗಡಿಸಿ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ನವೆಂಬರ್.26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು” ಎಂದು ಅವರು ತಾಕೀತು ಮಾಡಿದರು.
ರಾಜ್ಯಾದ್ಯಂತ ಬಗರ್ ಹುಕುಂ ಅಡಿ ಭೂ ಮಂಜೂರಾತಿ ಕೋರಿ 14ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅನರ್ಹ ಅರ್ಜಿಗಳ ಸಂಖ್ಯೆಯೇ ಅಧಿಕವಾಗಿದೆ. ಹೀಗಾಗಿ ಅರ್ಜಿಗಳನ್ನು ಅನರ್ಹ ಎಂದು ನಿರ್ಧರಿಸಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
ಅರ್ಜಿದಾರರು ನಿರ್ದಿಷ್ಟ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿಲ್ಲ, ನಿರ್ದಿಷ್ಟ ಪ್ರದೇಶದಲ್ಲಿ ಗೋಮಾಳ ಭೂಮಿ ಅಧಿಕ ಇಲ್ಲ, ಅರಣ್ಯ ಭೂಮಿಯನ್ನು ಕೋರಿ ಸಾಗುವಳಿಗೆ ಅರ್ಜಿ ಸಲ್ಲಿಸಿದ್ದರೆ, ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ 4.38 ಎಕರೆಗೂ ಅಧಿಕ ಜಮೀನು ಇದ್ದರೆ, ಅರ್ಜಿದಾರರು ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ್ರದೇಶದಲ್ಲಿ ವಾಸ ಇಲ್ಲದಿದ್ದರೆ, ಅರ್ಜಿಯೇ ನಕಲು ಆಗಿದ್ದರೆ ಅಥವಾ ಅರ್ಜಿದಾರರು ಅಧಿಕಾರಿಗಳ ಕೈಗೆ ಸಿಗದಿದ್ದರೆ ಅಂತಹ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗುವುದು. ಇದರ ಹೊರತಾಗಿ ಬೇರೆ ಸ್ವರೂಪದ ಸಮಸ್ಯೆಗಳು ಕಂಡುಬಂದರೆ ಅದನ್ನೂ ಸಹ ಪಟ್ಟಿಮಾಡಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ತಹಶೀಲ್ದಾರರಿಗೆ ಸೂಚಿಸಿದರು.