ಬೆಂಗಳೂರು: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿರುವುದು ನಮ್ಮ ಸರ್ಕಾರದ ಸಮರ್ಥ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಉಪ ಚುನಾವಣೆಯ ಫಲಿತಾಂಶದ ನಂತರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವರು, ಉಪ ಚುನಾವಣೆ ಫಲಿತಾಂಶಗಳು 2028 ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಸಂಡೂರು, ಕಿತ್ತೂರು ಕರ್ನಾಟಕದ ಶಿಗ್ಗಾಂವಿ ಹಾಗೂ ಮೈಸೂರು ಕರ್ನಾಟಕ ಭಾಗದ ಚನ್ನಪಟ್ಟಣದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದಿದ್ದಾರೆ. ಇದರೊಂದಿಗೆ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಬಿಜೆಪಿ ನಾಯಕರು ಬರೀ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರು. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ವಕ್ಫ್ ಕುರಿತು ಜನರನ್ನು ದಿಕ್ಕು ತಪ್ಪಿಸಲು ಬಿಜೆಪಿಗರು ಪ್ರಯತ್ನಿಸಿದರು. ಜನತಾ ನ್ಯಾಯಾಲಯದಲ್ಲಿ ಜನರೇ ತಕ್ಕ ತೀರ್ಪು ಕೊಟ್ಟಿದ್ದಾರೆ. ಇದರಿಂದ ಬಿಜೆಪಿಗೆ ಮತ್ತೊಮ್ಮೆ ಮುಖಭಂಗವಾಗಿದೆ ಎಂದು ಶರಣ್ ಪ್ರಕಾಶ್ ಪಾಟೀಲ್ ಕುಟುಕಿದ್ದಾರೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನಾವು ಅನುಷ್ಠಾನಕ್ಕೆ ತಂದಿದ್ದೇವೆ. ಒಂದೂವರೆ ವರ್ಷದಲ್ಲಿ ರಾಜ್ಯದ ಎಲ್ಲ ವರ್ಗದ ಜನರಿಗೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ತಲುಪಿವೆ. ಇದರ ಪ್ರತಿಫಲವೇ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ. ಅಭಿವೃದ್ಧಿ ಪರವಾಗಿರುವ ಸರ್ಕಾರಕ್ಕೆ ಜನರು ಮನ್ನಣೆ ನೀಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ತಮ್ಮ ಭದ್ರಕೋಟೆ ಎಂದು ಹೇಳಿಕೊಳ್ಳುವ ಬಿಜೆಪಿ ಮತ್ತು ಜೆಡಿಎಸ್ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಪರವಾಗಿ ಜನರು ಬೆಂಬಲ ನೀಡಿದ್ದಾರೆ. ಅಂದರೆ ಈ ಬಿಜೆಪಿ ಮತ್ತು ಜೆಡಿಎಸ್ ಈ ಕ್ಷೇತ್ರಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದಕ್ಕೆ ಮತದಾರರು ತಮ್ಮ “ಮತ”ದ ಮೂಲಕ ತಿರುಗೇಟು ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸುಳ್ಳಿನ ನಾಟಕಕ್ಕೆ ತೆರೆ ಎಳೆದಿದ್ದಾರೆ ಜನರು. ಕಾರ್ಯಕರ್ತರನ್ನು ಕಡೆಗಣಿಸಿದ ಬಿಜೆಪಿ, ಜೆಡಿಎಸ್ ಅನ್ನು ಜನರು ತಿರಸ್ಕರಿಸಿದ್ದಾರೆ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದ ಉಭಯ ಪಕ್ಷಗಳಿಗೆ ಜನರು ಸರಿಯಾಗಿ “ಸಾಣೆ” ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿಯೂ ನಾವು ಜನರಿಗೆ ಉತ್ತಮ ಸೇವೆ ನೀಡುತ್ತೇವೆ. ಈ ಉಪ ಚುನಾವಣೆಯ ಫಲಿತಾಂಶವೇ ನಮಗೆ ಇನ್ನಷ್ಟು ಸ್ಫೂರ್ತಿ ನೀಡಿದೆ ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ನಾನು ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಎದೆಗುಂದಲ್ಲ, ಹೋರಾಟ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ
ಈ ಉಪಚುನಾವಣೆ ಫಲಿತಾಂಶ, 2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DKS