ಬೆಂಗಳೂರು : ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭೆಯ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ, ಜೆಡಿಎಸ್ ತೀವ್ರ ಮುಖಭಂಗ ಎದುರಿಸಿದೆ. ಅದರಲ್ಲೂ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ಕುರಿತಾಗಿ ವಿಪಕ್ಷ ನಾಯಕ ಆರ್ ಅಶೋಕ ಬಹುಶಹ ನಿಖಿಲ್ ಕುಮಾರಸ್ವಾಮಿ ಅವರಿಗೆ ಅದೃಷ್ಟವಿಲ್ಲ ಅನಿಸುತ್ತದೆ ಎಂದು ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಈ ಒಂದು ತೀರ್ಪಿಗೆ ತಲೆಬಾಗುತ್ತೇವೆ. ಚುನಾವಣೆಯಲ್ಲಿ ಗೆಲ್ಲಲು ಕಾರಣವಿದ್ದಂತೆ ಸೋಲಿಗೂ ಕೂಡ ಕಾರಣವಿದೆ. ಕೊನೆಗಳಿಗೆಯಲ್ಲಿ NDA ಅಭ್ಯರ್ಥಿ ತೀರ್ಮಾನ ಮಾಡಿದ್ದೆವು. ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಮಕ್ಕಳನ್ನು ನಿಲ್ಲಿಸಲ್ಲ ಅಂತ ಹೇಳಿದ್ದರು. ಅದು ಕೂಡ ಮೈನಸ್ ಪಾಯಿಂಟ್ ಆಯ್ತು.
ನಿಖಿಲ್ ಕುಮಾರಸ್ವಾಮಿಗೆ ಅದೃಷ್ಟವಿಲ್ಲ ಅಂತ ಅನಿಸುತ್ತದೆ. ನಿಖಿಲ್ ಅರ್ಜುನನ ಪಾತ್ರ ಮಾಡುತ್ತಾರೆ ಅಂತ ಅಂದುಕೊಂಡಿದ್ದವು. ಆದರೆ ಮತ್ತೆ ಜನರು ನಿಖಿಲ್ ಕುಮಾರಸ್ವಾಮಿಗೆ ಅಭಿಮನ್ಯುವಿನ ಪಾತ್ರವನ್ನೇ ಕೊಟ್ಟಿದ್ದಾರೆ. ಎರಡು ಬಾರಿ ಸೋತು ಈ ಬಾರಿ ಗೆಲ್ಲುತ್ತಾರೆ ಅಂದುಕೊಂಡಿದ್ದೆವು. ಆದರೆ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿಯೂ ಕೂಡ ಸೋಲು ಅನುಭವಿಸಿದ್ದಾರೆ ಎಂದು ಆರ್ ಅಶೋಕ್ ಇದೆ ವೇಳೆ ತಿಳಿಸಿದರು.
ಆದರೆ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದೆ. ಅಭಿವೃದ್ಧಿಗೆ ಸಮಸ್ಯೆ ಆಗುತ್ತದೆ ಎಂದು ಜನರು ಮತ ಹಾಕಿದ್ದಾರೆ. ಈ ಗೆಲುವಿನಿಂದ ಕಾಂಗ್ರೆಸ್ ಗೆ ಕಿರೀಟ ಬಂದಿಲ್ಲ. ಹಣ ಅಧಿಕಾರ ದುರ್ಬಳಕೆ ಮಾಡಿ ಕಾಂಗ್ರೆಸ್ ನವರು ಗೆದ್ದಿದ್ದಾರೆ. ಚುನಾವಣಾ ತಯಾರಿಯನ್ನು ನಾವು ಇನ್ನಷ್ಟು ಬೇಗ ಮಾಡಬೇಕಾಗಿತ್ತು. ಸೋಲನ್ನೇ ಗೆಲುವಾಗಿಸುವ ಶಕ್ತಿ ನಮಗಿದೆ. ಇದು ಸಿದ್ದರಾಮಯ್ಯ ಗೆಲುವಲ್ಲ ಡಿಸಿಎಂ ಡಿಕೆ ಗೆಲುವು ಅಲ್ಲ. ಇದು ಕಾಂಚಾಣದ ಗೆಲುವು ಎಂದು ಆರ್ ಅಶೋಕ್ ತಿಳಿಸಿದರು.