ಬೆಂಗಳೂರು : ಇಂದು ಕಾಂಗ್ರೆಸ್ ಗೆ ಮಹತ್ವದ ದಿನವಾಗಿದ್ದು ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಗೆ ಕೌಂಟರ್ ನೀಡಿದೆ. ಈ ಒಂದು ಗೆಲುವಿನ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಮೂರು ಕ್ಷೇತ್ರಗಳ ಗೆಲುವು 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿ, ಟೀಕೆ ಸಾಯುತ್ತದೆ ಕೆಲಸ ಉಳಿಯುತ್ತದೆ ಅಂತ ನಾನು ಈ ಮೊದಲೇ ಹೇಳಿದ್ದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ. ಜನರ ಭಾವನೆಯ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡಬೇಕು ಹಾಗಾಗಿ ಜನ ಆಶೀರ್ವದಿಸಿದ್ದಾರೆ.ಗ್ಯಾರಂಟಿ ಯೋಜನೆಗಳ ಕುರಿತಂತೆ ವಿಪಕ್ಷಗಳು ಅಪಪ್ರಚಾರ ಮಾಡಿದರು. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿಗೆ ಹಣ ಇಲ್ಲ ಅಂತ ಆರೋಪಿಸಿದ್ದರು ಆದರೆ ಈಗ ಒಂದೇ ಕ್ಷೇತ್ರಕ್ಕೆ ಕೋಟಿ ಕೋಟಿ ಹಣ ಹೋಗುತ್ತಿದೆ ಎಂದರು.
ಈ ಒಂದು ಉಪಚುನಾವಣೆಯ ಗೆಲುವು 2028 ರ ಚುನಾವಣೆಗೆ ದಿಕ್ಸೂಚಿಯಾಗಿದೆ. 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳಿಗೆ ಜನರು ಮತ ನೀಡಿದ್ದಾರೆ. ಗ್ಯಾರಂಟಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನರು ಮತ ನೀಡಿದ್ದಾರೆ. ಸಮೀಕ್ಷೆಗಳು ಸುಳ್ಳಾಗುತ್ತವೆ ಅಂತ ನಾನು ನಿನ್ನೆ ಸಂಜೆಯೇ ಹೇಳಿದ್ದೆ. ನಾವು ಮಾಡುವ ಸಮೀಕ್ಷೆಯೇ ಬೇರೆ ಅಂತ ಹೇಳಿದ್ದೆ. ಬಿಜೆಪಿ ಜೆಡಿಎಸ್ ಮೈತ್ರಿಯಾದರೂ ನಮಗೆ ಗೆಲುವು ಸಿಕ್ಕಿದೆ. ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆನ್ನಾಗಿರುತ್ತೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ ಎಂದರು.
2028ರ ವಿಧಾನಸಭೆ ಚುನಾವಣೆಗೆ ಜನ ಮುನ್ನುಡಿ ಬರೆಯುತ್ತಿದ್ದಾರೆ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರದ ಜನರು ಈಗ ಮುನ್ನುಡಿ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ಮೇಲೆ ಆರೋಪ ಮಾಡಿದ್ದರು. ಸುಳ್ಳೇ ಕಾಂಗ್ರೆಸ್ ಪಕ್ಷದ ಮನೆ ದೇವರು ಎಂದು ಪ್ರಚಾರ ಮಾಡಿದ್ದರು ಅದಕ್ಕೆ ಮತದಾರರೇ ಈಗ ಉತ್ತರ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅನೇಕ ಬಾರಿ ಟೀಕೆ ಮಾಡಿದ್ದಾರೆ ಎಂದರು.