ಮಂಗಳೂರು : ಮಂಗಳೂರಿನಲ್ಲಿ ಅನೈತಿಕ ಸಂಬಂಧವನ್ನು ಪ್ರಶ್ನಿಸಿದಕ್ಕೆ ಪತ್ನಿಗೆ ಪತಿಯೊಬ್ಬ ತ್ರಿವಳಿ ತಲಾಖ್ ಹೇಳಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಸಿದಂತೆ ಇದೀಗ ಮಂಗಳೂರು ಮಹಿಳಾ ಠಾಣೆಯ ಪೊಲೀಸರು ಆರೋಪಿ ಪತಿಯನ್ನು ಅರೆಸ್ಟ್ ಮಾಡಿದ್ದಾರೆ. ಮಂಗಳೂರಿನ ಉಳ್ಳಾಲದ ಮಹಮ್ಮದ್ ದಿಲ್ಫಾಜ್ ತ್ರಿವಳಿ ತಲಾಖ್ ನೀಡಿದ ಆರೋಪಿ ಎಂದು ತಿಳಿದುಬಂದಿದೆ.
ಕಳೆದ 2019 ರಲ್ಲಿ ಮಹಮ್ಮದ್ ದಿಲ್ಫಾಜ್ ಮಾಸ್ತಿಕಟ್ಟೆ ನಿವಾಸಿ ಹೀನಾ ಫಾತಿಮಾ ಎನ್ನುವವರೊಂದಿಗೆ ಮದುವೆಯಾಗಿದ್ದರು. ಬಳಿಕ ಕೆಲವು ವರ್ಷಗಳ ಕಾಲ ಸಂತೋಷವಾಗಿಯೇ ಇದ್ದರು. ಯಾವಾಗ ಪತಿ ಬೇರೆ ಅನ್ಯ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ವಿಷಯ ತಿಳಿತೋ, ಆಗ ಪತಿಯನ್ನು ಹೀನಾ ಪ್ರಶ್ನಿಸಿದ್ದಾಳೆ. ಪತ್ನಿ ವಿಚಾರಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಹೀನಾ ಫಾತಿಮಾ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಬಳಿಕ ಕುಟುಂಬದ ಹಿರಿಯರು ಪಂಚಾಯಿತಿ ನಡೆಸಿ ಮೊಹಮ್ಮದ್ ದಿಲ್ಫಾಜ್‌ಗೆ ಬುದ್ಧಿ ಮಾತನ್ನು ಹೇಳಿದ್ದರು. ಆದರೂ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ. ನವೆಂಬರ್ 8 ರಂದು ಈ ಬಗ್ಗೆ ಹೀನ ಫಾತಿಮಾ ತಂದೆ ಸಬೀಲ್ ಅಹಮ್ಮದ್ ಅವರು ಮೊಹಮ್ಮದ್ ದಿಲ್ಫಾಜ್‌ನಲ್ಲಿ ವಿಚಾರಿಸಿದ್ದಕ್ಕೆ ಆತ ಪತ್ನಿಗೆ ಹಲ್ಲೆ ನಡೆಸಿದ್ದಲ್ಲದೆ, ಪತ್ನಿಯ ತಂದೆಯನ್ನು ಮನೆಗೆ ಕರೆದು ಅವರ ಎದುರಿನಲ್ಲಿಯೇ ಪತ್ನಿ ಹೀನಾ ಫಾತಿಮಾಗೆ ಮೂರು ಬಾರಿ ತಲಾಖ್ ಹೇಳಿದ್ದಾನೆ. ಇನ್ನು ಮುಂದೆ ನೀನು ನನ್ನ ಪತ್ನಿಯಲ್ಲ ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ.
ಅಲ್ಲದೆ, ಅಜ್ಜಿ ತನ್ನ ಹೆಸರಿನಲ್ಲಿ ಹೂಡಿಕೆ ಮಾಡಿರುವ 50 ಸಾವಿರ ರೂ. ಮೆಚೂರ್ಡ್ ಆದರೆ ದೊರಕುವ 8 ಲಕ್ಷ ರೂ. ಹಣವನ್ನು ಪತಿ ಹಾಗೂ ಪತಿಯ ತಂದೆಗೆ ನೀಡಬೇಕೆಂದು ಕಿರುಕುಳ ನೀಡಿರುತ್ತಾರೆ ಎಂದು ಹೀನ ಫಾತಿಮಾ ತನ್ನ ಪತಿ ಮೊಹಮ್ಮದ್ ದಿಲ್ಫಾಜ್ ಹಾಗೂ ಆತನ ತಂದೆ ಉಮರಬ್ಬ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಮೊಹಮ್ಮದ್ ದಿಲ್ಫಾಜ್‌ನನ್ನು ಬಂಧಿಸಿದ್ದಾರೆ.