ಬೆಳಗಾವಿ : ಬಿಜೆಪಿಯವರು 50 ಕೋಟಿ ರೂಪಾಯಿ ಆಫರ್ ನೀಡಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು ರಾಜ್ಯ ಸರ್ಕಾರ ಬೀಳಿಸೋದಾಗಿದ್ರೆ ನಾನೇ ನೇತೃತ್ವ ವಹಿಸುತ್ತಿದ್ದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರು ಒಬ್ಬ ಶಾಸಕನಿಗೆ 50 ಕೋಟಿ ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಸರ್ಕಾರ ಬೀಳಿಸುವ ಮನಸ್ಸು ಮಾಡಿದ್ದರೆ ಅದರ ಜವಾಬ್ದಾರಿ ನಾನೇ ತೆಗೆದುಕೊಳ್ಳು ತ್ತಿದ್ದೆ ಎಂದು ಬಿಜೆಪಿ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.
ಆದರೆ ನಮಗ್ಯಾರಿಗೂ ಆ ಉದ್ದೇಶ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿಗೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರೂ ಕೂಡ ನಾನೇ ಈ ಸರ್ಕಾರದ ಅಧಿಕಾರ ಅವಧಿ ಮುಗಿಯುವವರೆಗೆ ಅಲ್ಲಿಯೇ ಇರುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.