ಶಿವಮೊಗ್ಗ: ಮುರಿದೋದ, ಕುಳಿತ್ರೆ ಮುರಿದೋಗುತ್ತೆ ಎನ್ನುವ ಭಯ, ಫ್ಯಾನ್, ಲೈಟ್ ಹಾಕೋದಕ್ಕೆ ಹೋದ್ರೆ ಕರೆಂಟ್ ಶಾಕ್, ತಲೆಯ ಮೇಲೆ ಮಣ್ಣು, ಡೆಸ್ಕ್ ಮೇಲಂತೂ ಧೂಳೋ ಧೂಳು. ಇದು ಸಾಗರ ನಗರದಲ್ಲಿರುವಂತ ಪ್ರತಿಷ್ಠಿತ ಕಾಲೇಜಿನ ದುಸ್ಥಿತಿ. ಇದನ್ನು ಖಂಡಿಸಿ ಇಂದು ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಕಂಡು ಬಂದಿತು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಜೋಗ ರಸ್ತೆಯಲ್ಲಿರುವಂತ ಎಲ್ ಬಿ ಕಾಲೇಜಿನ ಆಡಳಿತ ಮಂಡಳಿಯಾದಂತ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ(ರಿ) ವಿರುದ್ಧ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಾಲೇಜಿನಲ್ಲಿ ಶುಚಿತ್ವಕ್ಕೆ ಒತ್ತು ನೀಡುತ್ತಿಲ್ಲ. ಗಲೀಜು ಪ್ರದೇಶದಲ್ಲೇ ಕುಳಿತು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು.
ಪತ್ರಕರ್ತರನ್ನು ಬನ್ನಿ ಸಾರ್ ನೋಡಿ ಕಾಲೇಜಿನಲ್ಲಿನ ನಮ್ಮ ಕೊಠಡಿಗಳನ್ನು. ಕುಳಿತು ಪಾಠ ಕೇಳೋಕೆ ಮನಸ್ಸಾಗೋದು ಇರಲಿ, ಭಯವಾಗುತ್ತದೆ ಆ ಸ್ಥಿತಿಯಲ್ಲಿ ಇದೆ ಅಂತ ವಿದ್ಯಾರ್ಥಿಗಳು ಅಂದಾಗ, ಎಲ್ ಬಿ ಕಾಲೇಜಿನ ಕೊಠಡಿಗಳಿಗೆ ಭೇಟಿ ನೀಡಿದಾಗ ಕಂಡಿದ್ದೇ ಗಲೀಜೋ ಗಲೀಜು.
ಕಾಲೇಜು ಕೊಠಡಿಯಲ್ಲಿ ಎಲ್ಲೆಲ್ಲೂ ಗಲೀಜು, ಧೂಳೋ ಧೂಳು
ಕಾಲೇಜಿನ ಕೊಠಡಿಗೆ ಹೋಗಿ ನೋಡಿದ್ರೆ ಡೆಸ್ಕ್ ಮೇಲೆ ಒಂದು ವಾರವೋ, ತಿಂಗಳಿನಿಂದಲೋ ಕಾಲೇಜು ತೆರೆದಿಲ್ಲ. ವಿದ್ಯಾರ್ಥಿಗಳು ಬಂದಿಲ್ಲ. ಅದಕ್ಕೆ ಹೀಗೆ ಇದೆ ಅನ್ನುವಷ್ಟು ಧೂಳು ಕುಳಿತಿತ್ತು. ಕೈ ಮುಟ್ಟಿ ನೋಡಿದ್ರೆ ಇಂತಹ ಡೆಸ್ಕ್ ಮೇಲೆ ವಿದ್ಯಾರ್ಥಿಗಳು ಹೇಗಪ್ಪ ಪಾಠ ಕೇಳ್ತಾರೆ ಅನ್ನಿಸ್ತು. ಆ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದ್ರೆ ಸಾರ್ ದಿನವೂ ನಾವೇ ಕ್ಲೀನ್ ಮಾಡಿಕೊಂಡು ಕುಳಿತುಕೊಳ್ಳಬೇಕು. ಕಳೆದ ಕೆಲ ತಿಂಗಳ ಹಿಂದೆ ಆಡಳಿತ ಮಂಡಳಿಗೆ ಸರಿ ಮಾಡಿ, ಕಾಲೇಜು ಕೊಠಡಿಗಳನ್ನು ಶುಚಿಗೊಳಿಸೋದಕ್ಕೆ ವ್ಯವಸ್ಥೆ ಮಾಡಿ ಅಂದ್ರೆ ಈವರೆಗೆ ಮಾಡಿಲ್ಲ ಅಂತ ಆರೋಪಿಸಿದರು.
ಇನ್ನೂ ಕೊಠಡಿಯ ಗಾರೆ ಎಲ್ಲಾ ಕಿತ್ತು ಹೋಗಿದ್ದರೇ, ಕಿಟಕಿ, ಬಾಗಿಲುಗಳಿಗೆ ಗೆದ್ದಲು ಹಿಡಿದು ಹಾಳಾಗಿದ್ದಾವೆ. ಕೊಠಡಿಯ ಸ್ವಲ್ಪ ದೂರದಲ್ಲೇ ಆಳೆತ್ತರದ ಹುಲ್ಲು ಬೆಳೆದಿದ್ದು, ಯಾವಾಗ ಬೇಕಾದ್ರು ನಾಗರಾಜ ಕಾಲೇಜಿನ ಒಳಗಡೆ ಪ್ರವೇಶಿಸಬಹುದು ಎನ್ನುವಂತ ಆತಂಕವನ್ನು ವಿದ್ಯಾರ್ಥಿಗಳು ವ್ಯಕ್ತ ಪಡಿಸಿದ್ದಾರೆ.
ಫ್ಯಾನ್ ಸ್ವಿಚ್ ಹಾಕೋಕೆ ಹೋದ್ರೆ ಕರೆಂಟ್ ಶಾಕ್
ಕಾಲೇಜಿನ ಕೊಠಡಿಗಳಲ್ಲಿರುವಂತ ಫ್ಯಾನ್ ಸ್ವಿಚ್ ಹಾಕೋದಕ್ಕೆ ಹೋದರೇ ಕರೆಂಟ್ ಶಾಕ್ ಹೊಡೆಯುತ್ತಿದೆಯಂತೆ. ಒಂದು ವೇಳೆ ಶಾಕ್ ಹೊಡೆದು ಪ್ರಾಣಹಾನಿಯಾದರೇ ಯಾರು ಹೊಣೆ? ಇದರ ಬಗ್ಗೆ ಆಡಳಿತ ಮಂಡಳಿಗೆ ಹೇಳಿದ್ರೂ ಸರಿ ಮಾಡಿಲ್ಲ. ಕೂಡಲೇ ಸರಿಪಡಿಸಿ, ಸಮಸ್ಯೆ ಇತ್ಯರ್ಥ ಪಡಿಸುವಂತೆ ಆಗ್ರಹಿಸಿದರು.
ಫ್ಯಾನ್ ಓಡಲ್ಲ, ತಲೆ ಮೇಲೆ ಗೆದ್ದಲು ಮಣ್ಣ ಬೀಳೋದು ತಪ್ಪಿಲ್ಲ
ಸಾಗರದ ಜೋಗ ರಸ್ತೆಯಲ್ಲಿರುವಂತ ಎಲ್ ಬಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವಂತ ಕೊಠಡಿಯ ಫ್ಯಾನ್ ಗಳಂತೂ ಒಂದೂ ಸರಿಯಿಲ್ಲ. ಎಲ್ಲವೂ ಹಾಳಾಗಿದ್ದು, ಬೇಸಿಗೆಯಲ್ಲಿ ಭಾರೀ ಸೆಕೆಯ ನಡುವೆಯೂ ವಿದ್ಯಾರ್ಥಿಗಳು ಪಾಠ ಕೇಳುವಂತ ದುಸ್ಥಿತಿ ಇದೆ.
ಇದಷ್ಟೇ ಅಲ್ಲದೇ ಕೊಠಡಿಯ ಎಂಚಿನ ಮೇಲಿನಿಂದ ಕಂಬಳಿ ಹುಳುಗಳು ಬೀಳುತ್ತಿವೆ. ಔಷಧಿ ಹೊಡೆಯೋದಕ್ಕೆ ಹೇಳಲಾಗಿತ್ತು. ಹೊಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಕ್ಲಾಸ್ ಕೇಳುತ್ತಿದ್ದಾಗಲೇ ಕಂಬಳಿ ಹುಳುಗಳು ಮೇಲೆ ಬೀಳುತ್ತಾವೆ. ಇದರ ಜೊತೆಗೆ ಕೊಠಡಿಯಲ್ಲಿ ಪಕ್ಷಿಗಳು ವಾಸಸ್ಥಳವಾಗಿದೆ. ಈ ಕಾರಣಕ್ಕೆ ಪಕ್ಷಿಗಳ ಹಿಕ್ಕೆಯೆಲ್ಲ ಕೊಠಡಿಯಲ್ಲಿ ಬಿದ್ದಿದ್ದು, ಗಬ್ಬು ವಾಸನೆಯಲ್ಲೇ ವಿದ್ಯಾರ್ಥಿಗಳು ಪಾಠವನ್ನು ಕೇಳುವಂತ ಪರಿಸ್ಥಿತಿ ಒದಗಿದೆ.
ಒಂದೂವರೆ ತಿಂಗಳ ಹಿಂದೆಯೇ ಅವ್ಯವಸ್ಥೆ ಸರಿಪಡಿಸಲು ಆಡಳಿತ ಮಂಡಳಿಗೆ ಮನವಿ
ವಿದ್ಯಾರ್ಥಿಗಳು ಕಳೆದ ಒಂದೂವರೆ ತಿಂಗಳ ಹಿಂದೆಯೇ ಕಾಲೇಜು ಕೊಠಡಿಯಲ್ಲಿನ ಅವ್ಯವಸ್ಥೆಯನ್ನು ಸರಿ ಪಡಿಸುವಂತೆ ಮನವಿಯನ್ನು ಆಡಳಿತ ಮಂಡಳಿಗೆ ಮಾಡಲಾಗಿತ್ತು. ಆದರೇ ಈವರೆಗೆ ಸರಿಪಡಿಸಿರಲಿಲ್ಲ. ಈ ಹಿನ್ನಲೆಯಲ್ಲೇ ಇಂದು ಕಾಲೇಜಿನ ಮುಂದೆ ಕಲಾ ವಿಭಾಗದ ವಿದ್ಯಾರ್ಥಿಗಳು ತರಗತಿ ಭಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸಿದರು. ಈ ಕೂಡಲೇ ಸಮಸ್ಯೆ ಸರಿಪಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿದರು.
ವರದಿ: ವಸಂತ ಬಿ ಈಶ್ವರಗೆರೆ
BIG NEWS: ಹೇರ್ ಡ್ರೈಯರ್ ಸ್ಪೋಟಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಲ್ಲಿದೆ ಘಟನೆಯ ಹಿಂದಿನ ಭಯಾನಕ ಸ್ಕೆಚ್
BREAKING : ಬೆಂಗಳೂರಲ್ಲಿ ಸಿಸಿಬಿ ಮತ್ತೊಂದು ಕಾರ್ಯಾಚರಣೆ : ಇಬ್ಬರು ವಿದೇಶಿ ಪೆಡ್ಲರ್ ಗಳ ಬಂಧನ