ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳಲ್ಲಿ ಕೈಗೊಳ್ಳಲಾಗಿರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇ-ಸಹಿ ಮಾಡಿ ಅಂಚೆ ಚಲನ್ ಪಡೆಯುವ ದಿನಾಂಕವನ್ನು ಹಾಗೂ ಅರ್ಜಿ ಶುಲ್ಕ ಪಾವತಿ ಮಾಡುವ ದಿನಾಂಕವನ್ನು ಕ್ರಮವಾಗಿ ಡಿ.5 ಹಾಗೂ ಡಿ.10 ರವರೆಗೆ ವಿಸ್ತರಿಸಲಾಗಿದೆ.
ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಲ್ಲಿ ಸದರಿ ಹುದ್ದೆಗಳ ಭರ್ತಿಗಾಗಿ 2024ರ ಅಕ್ಟೋಬರ್ 14ರಂದು ಉದ್ಯೋಗ ಪ್ರಕಟಣೆ ಹೊರಡಿಸಲಾಗಿತ್ತು. ಅದರಂತೆ, ನೇಮಕಾತಿಗೆ ಅರ್ಜಿ ಸಲ್ಲಿಸಲು 2024ರ ನವೆಂಬರ್ 20 ಹಾಗೂ ಅರ್ಜಿ ಶುಲ್ಕ ಪಾವತಿಸಲು ನವೆಂಬರ್ 25ಕ್ಕೆ ಕೊನೆಯ ದಿನಾಂಕವೆಂದು ನಿಗದಿ ಪಡಿಸಲಾಗಿತ್ತು.
ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಹಂತ ಹಂತವಾಗಿ ಮಾಡಬೇಕಿದ್ದು, ಅರ್ಜಿ ನಮೂನೆಯಲ್ಲಿ ಮಾಹಿತಿ ಸಲ್ಲಿಸುವುದು, ಅರ್ಜಿ ಶುಲ್ಕ ಪಾವತಿಗೆ ಅಂಚೆ ಇಲಾಖೆಯ ಚಲನ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕ ಪಾವತಿಸಬೇಕಿದೆ. ಅದಕ್ಕೂ ಮುನ್ನ ಅಭ್ಯರ್ಥಿಗಳು ಇ-ಸಹಿ ಪ್ರಕ್ರಿಯ ಪೂರ್ಣಗೊಳಿಸಬೇಕಿರುತ್ತದೆ. ಆದರೆ, ನಿಗದಿಪಡಿಸಿದ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಅಭ್ಯರ್ಥಿಗಳು ತಿಳಿಸಿರುವ ಹಿನ್ನೆಲೆಯಲ್ಲಿ, ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಕಪಿಟಿಸಿಎಲ್ ಪ್ರಕಟಣೆ ತಿಳಿಸಿದೆ.
“ಅಭ್ಯರ್ಥಿಗಳ ಮನವಿ ಪರಿಗಣಿಸಿ ಅರ್ಜಿ ಸಲ್ಲಿಕೆಯ ಮೊದಲೆರಡು ಹಂತ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳಿಗೆ ಸೀಮಿತೊಳಿಸಿ, ಇ-ಸಹಿ ಪ್ರಕ್ರಿಯೆ, ಅಂಚೆ ಕಚೇರಿ ಚಲನ್ ಡೌನ್‌ಲೋಡ್ ಮತ್ತು ಅರ್ಜಿ ಶುಲ್ಕ ಪಾವತಿ ದಿನಾಂಕಗಳನ್ನು ವಿಸ್ತರಿಸಲಾಗಿದೆ.” ಎಂದು ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ವಿಸ್ತರಿಸಲಾಗಿರುವ ಅವಧಿಯ ಸದುಪಯೋಗ ಪಡೆದು, ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸುವಂತೆ ಮತ್ತು ಅರ್ಜಿ ಶುಲ್ಕ ಪಾವತಿಸುವಂತೆ ಕೋರಲಾಗಿದೆ.