ಬೆಳಗಾವಿ : ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ರದ್ದಾಗಿದ್ದರೂ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಬರುವುದಿಲ್ಲ, ಬಿಪಿಎಲ್ ಗೆ ಅರ್ಹವಲ್ಲದ ಕಾರ್ಡ್ ಗಳನ್ನು ಮಾತ್ರ ಎಪಿಎಲ್ ಗೆ ಬದಲಾವಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾಗಿದ್ದರೂ ತೆರಿಗೆ ಪಾವತಿಸಿದರೆ ಗೃಹಲಕ್ಷ್ಮಿ ಹಣ ಬರುವುದಿಲ್ಲ. ತೆರಿಗೆ ಪಾವತಿಸದಿದ್ದರೆ ಮಾತ್ರ ಹಣ ಖಾತೆಗೆ ಜಮಾ ಆಗಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡ್ ಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಯಾವುದೇ ಗೊಂದಲ ಇಲ್ಲ. ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಇದ್ದವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ ಎಂದು ತಿಳಿಸಿದ್ದಾರೆ.