ಚಾಮರಾಜನಗರ : ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಅಕ್ರಮ-ಸಕ್ರಮ ಯೋಜನೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವವರು, ಅಕ್ರಮ ಸಕ್ರಮ ಯೋಜನೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ಆದ್ಯತೆ ಮೇರೆಗೆ 1,500 ಅರ್ಜಿಗಳನ್ನು ತೆಗೆದುಕೊಳ್ಳಲಿದ್ದು, ಎರಡು ವರ್ಷದೊಳಗೆ ಬಾಕಿ ಎಲ್ಲಾ ಅರ್ಜಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರೈತರ ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ವಿದ್ಯುತ್ ಕಳವು ತಪ್ಪಿಸಲು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಆಧಾರ್ ಜೋಡಣೆಯಿಂದ ವಿದ್ಯುತ್ ಕಳ್ಳತನ ತಪ್ಪಲಿದೆ ಹೇಳಿದ್ದಾರೆ.
ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮದಡಿ 4 ಲಕ್ಷ ಅರ್ಜಿಗಳು ಬಾಕಿ ಉಳಿದಿದ್ದು, ಅವುಗಳೆಲ್ಲ ಕಡಿಮೆಯಾಗಿದೆ. ವಿದ್ಯುತ್ ಲೈನ್ ನಿಂದ 500 ಮೀಟರ್ ಒಳಗೆ ಇರುವ ಕೃಷಿ ಪಂಪ್ಸೆಟ್ ಗಳ ಸಕ್ರಮಕ್ಕೆ ಕ್ರಮ ವಹಿಸಲಾಗುವುದು. 500 ಮೀ.ಗಿಂತ ದೂರ ಇರುವ ಕೃಷಿ ಪಂಪ್ ಸೆಟ್ ಗಳಿಗೆ ಕುಸುಮ್ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.