ಬೆಂಗಳೂರು : ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ ನೀಡಿದ್ದು, 20 ವರ್ಷಗಳಿಂದ ಪೊಲೀಸರ ಹುಡುಕಾಟದಲ್ಲಿದ್ದ ಗೌಡ, ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಪೊಲೀಸರು ಕೂಡ ಪ್ರತಿ ದಾಳಿ ನಡೆಸಿ ಗ್ರೇಡೆಡ್ ನಕ್ಸಲನ್ನು ಎನ್ಕೌಂಟರ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 20 ವರ್ಷಗಳಿಂದ ನಕ್ಸಲ್ ವಿಕ್ರಂ ಗೌಡನನ್ನು ಹಿಡಿಯಲು ಆಗಿರಲಿಲ್ಲ. ಖಚಿತ ಮಾಹಿತಿಯ ಮೇರೆಗೆ ವಿಕ್ರಂ ಗೌಡನನ್ನು ಹಿಡಿಯಲು ಹೋಗಿದ್ದರು. ಈ ವೇಳೆ ವಿಕ್ರಂ ಗೌಡ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಪೊಲೀಸರು ಪ್ರತ್ಯುತ್ತರ ನೀಡಿ ಎನ್ಕೌಂಟರ್ ಮಾಡಿದ್ದಾರೆ ಎಂದು ಮಾಹಿತಿ ಬಂದಿದೆ. ಸಂಪೂರ್ಣ ಮಾಹಿತಿ ಲಭಿಸಿದ ಮೇಲೆ ತಿಳಿಸುವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ನಿನ್ನೆ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಆತನ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದರು. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಸೋಮವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಆತ ಆತ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಆತನ ಜತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.