ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಅರಣ್ಯಾಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಂ ಸೂರನಗದ್ದೆ ನಿವಾಸದಲ್ಲಿ ಜಿಂಕೆ ಮಾಂಸವನ್ನು ಜಪ್ತಿ ಮಾಡಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಜಯರಾಂ ಅವರ ಸೂರನಗದ್ದೆಯ ಬೀರೇಶ್ವರ ದೇವಸ್ಥಾನದ ಬಳಿಯ ನಿವಾಸದಲ್ಲಿ ಜಿಂಕೆಯನ್ನು ಹತ್ಯೆ ಮಾಡಿ, ಮಾಂಸ ದೂಟ ಮಾಡುತ್ತಿದ್ದ ಖಚಿತ ಮಾಹಿತಿ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಅವರಿಗೆ ತಿಳಿದು ಬಂದಿತ್ತು. DFO ಗಮನಕ್ಕೆ ತಂದಿದ್ದರು. ಅವರ ನಿರ್ದೇಶನದ ಮೇರೆಗೆ ACF ರವಿ ನೇತೃತ್ವದಲ್ಲಿ, RFO ಅಣ್ಣಪ್ಪ ಅವರು ಸೂರನಗದ್ದೆಯಲ್ಲಿನ ಜಯರಾಂ ನಿವಾಸದ ಮೇಲೆ ಕಳೆದ ತಡರಾತ್ರಿ 1 ಗಂಟೆಯ ಹಾಗೆ ದಾಳಿ ನಡೆಸಿದ್ದಾರೆ.
ಈ ದಾಳಿಯ ವೇಳೆಯಲ್ಲಿ ಜಯರಾಂ ಸೂರನಗದ್ದೆ ಅವರ ಮನೆಯಲ್ಲಿ ಒಂದರಿಂದ ಎರಡು ಕೆಜಿಯಷ್ಟು ಜಿಂಕೆ ಮಾಂಸ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಜಿಂಕೆಯನ್ನು ಹತ್ಯೆ ಮಾಡಿ, ಮಾಂಸವನ್ನು ಹಂಚಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ.
ಇದೀಗ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಂ ಸೂರನಗದ್ದೆ ಮನೆಯಲ್ಲಿ ಜಿಂಕೆ ಮಾಂಸ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂಬುದಾಗಿ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಮಾಹಿತಿ ನೀಡಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ ಜಯರಾಂ ಸೂರನಗದ್ದೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚಿ ಬಂಧಿಸೋ ಕಾರ್ಯದಲ್ಲಿ ಅರಣ್ಯಾಧಿಕಾರಿಗಳು ತೊಡಗಿದ್ದಾರೆ.
ದಾಳಿಯ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಜಯ್ ಕುಮಾರ್, ಗಸ್ತು ಅರಣ್ಯ ಪಾಲಕರಾದಂತ ಯುವರಾಜ್, ಧನಶೇಖರ್, ಸುಮಿತ, ವೇದ ನಾಯ್ಕ್, ಉಮೇಶ್, ಶಿವನಗೌಡ್ರು ಜೊತೆಗಿದ್ದರು.