ದಾವಣಗೆರೆ : ಸಮಾಜದ ಅನಿಷ್ಟ ಪದ್ದತಿಯಾದ ಬಾಲ್ಯವಿವಾಹವನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ಹಿನ್ನಲೆಯಲ್ಲಿ ಇದಕ್ಕೆ ಸಹಕಾರ ನೀಡುವ ಪೋಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆ, ಜಿಲ್ಲಾ ಮಟ್ಟದ ಪೋಸ್ಕೋ ಸಭೆ, ವಿಶೇಷ ಕಾರ್ಯಪಡೆ ಸಭೆ, ಯುಟಿಆರ್‍ಸಿ ಸಭೆ, ಬಾಲನ್ಯಾಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಘಟಿಸಿದ 20 ಬಾಲ್ಯ ವಿವಾಹ ಪ್ರಕರಣಗಳಲ್ಲಿ 16 ರನ್ನು ತಡೆದು 4 ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಎಲ್ಲಾ ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಲು ಕ್ರಮ ವಹಿಸಬೇಕು. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸಹಕಾರ ನೀಡುವ ಅಂತಹ ಎರಡೂ ಕಡೆಯ ಪೋಷಕರ ಮೇಲೆ ಎಫ್‍ಐಆರ್ ದಾಖಲಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಎಫ್‍ಐಆರ್ ದಾಖಲಿಸದೇ ಪ್ರಕರಣವನ್ನು ಕೈಬಿಡಬಾರದೆಂದು ಸೂಚನೆ ನೀಡಿದರು.
ಶಾಲಾ, ಕಾಲೇಜು ಫಲಕದಲ್ಲಿ ಮಾಹಿತಿ; ಖಾಸಗಿ ಸೇರಿದಂತೆ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ, ಮಾನವ ಕಳ್ಳಸಾಗಣೆ ತಡೆ, ಬಾಲನ್ಯಾಯ ಮಂಡಳಿ ಸೇರಿದಂತೆ ಸಹಾಯಕ್ಕಾಗಿ ಇರುವ ಮತ್ತು ತುರ್ತು ಸಂಪರ್ಕಕ್ಕಾಗಿ ಇರುವ ಸಹಾಯವಾಣಿಗಳ ಕುರಿತಂತೆ ಎಲ್ಲಾ ಶಾಲಾ, ಕಾಲೇಜುಗಳ ಸೂಚನಾ ಫಲಕಗಳಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಕಟ್ಟುನಿಟ್ಟಿನ ಪ್ರದರ್ಶನ ಅಳವಡಿಸಬೇಕೆಂದು ಸೂಚನೆ ನೀಡಿ ಶಾಲಾ, ಕಾಲೇಜುಗಳಲ್ಲಿ ಇಂತಹ ಕಾನೂನುಗಳ ಅರಿವು, ನೆರವು ವಿಷಯವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಆಯಾ ಶಾಲಾ, ಕಾಲೇಜಿನವರೇ ಕಡ್ಡಾಯವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಕಾರ್ಯಕ್ರಮ ಏರ್ಪಡಿಸಿದ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ವರದಿಯನ್ನು ದಾಖಲೆ ಸಮೇತ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ನೀಡಲು ಸೂಚನೆ ನೀಡಿದರು.
ಆರ್.ಸಿ.ಹೆಚ್.ಪೋರ್ಟಲ್ ಮಾಹಿತಿ ಹಂಚಿಕೊಳ್ಳಲು ಸೂಚನೆ; ಬಾಲ್ಯ ವಿವಾಹವಾಗಿ ಗರ್ಭಿಣಿಯಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ತಾಯಿ ಕಾರ್ಡ್ ನೀಡುವಾಗ ಆರ್‍ಸಿಹೆಚ್ ಪೋರ್ಟಲ್‍ನಲ್ಲಿ ವಿವರ ದಾಖಲಿಸಲಾಗುತ್ತದೆ. ಬಾಲ್ಯ ವಿವಾಹವಾಗಿದ್ದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆ ಗಮನಕ್ಕೆ ಆಸ್ಪತ್ರೆ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ತರಬೇಕಾಗುತ್ತದೆ. ಒಂದು ವೇಳೆ ಮಾಹಿತಿಯನ್ನು ಮುಚ್ಚಿಡುವ ವೈದ್ಯರ ಮೇಲೆ ಪೋಕ್ಸೊ ಅಡಿ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದು ಎಚ್ಚರಿಸಿ ಎಲ್ಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅಗತ್ಯವಾಗಿರುವ ಮಾಹಿತಿಯುಳ್ಳ ಪೋಸ್ಟರ್ ಮುದ್ರಿಸಿ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಅಳವಡಿಸಲು ಸೂಚನೆ ನೀಡಿದರು.
ರಾಷ್ಟ್ರೀಯ ಲೋಕ್ ಅದಾಲತ್; ಬರುವ ಡಿಸೆಂಬರ್ 14 ರಂದು ರಾಷ್ಟ್ರೀಯ ಲೋಕಾದಾಲತ್ ನಡೆಯಲಿದ್ದು ಅಷ್ಟರೊಳಗಾಗಿ ಎಲ್ಲಾ ರಾಜೀಯಾಗಬಲ್ಲ ಪ್ರಕರಣಗಳನ್ನು ಪಟ್ಟಿ ಮಾಡಿ ಇತ್ಯರ್ಥಕ್ಕೆ ಕ್ರಮ ವಹಿಸಬೇಕು. ಸಾರ್ವಜನಿಕರು ಸಹ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕಾಗಿದ್ದು ಇಲಾಖೆಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಲು ತಿಳಿಸಿದರು.
ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ.ಕರೆಣ್ಣವರ, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣ್‍ಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.