ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಡಿಸೆಂಬರ್ 01 2024 ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್ ಅವರು ಆಹಾರ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ 2024-25ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕುರಿತು ಚರ್ಚಿಸಲು ಕರೆಯಲಾಗಿದ್ದ ಮೊದಲನೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂಗಳ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಪಡಿಸಿದ್ದು ರಾಜ್ಯ ಸರ್ಕಾರ ಆದೇಶಿಸಿದೆ. ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಪ್ರತಿ ತಾಲ್ಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಕಾರ್ಯಕ್ಕೆ ನಿಗದಿತ ಸ್ಥಳಗಳನ್ನು ಗುರ್ತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ನೋಂದಣಿಗೆ ಯಾವುದೇ ಸಮಸ್ಯೆ ಆಗದಂತೆ ಕಂಪ್ಯೂಟರ್ ಗಳು, ಇಂಟರ್ನೆಟ್ ವ್ಯವಸ್ಥೆ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಿ. ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರಂ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ , ಯಲಹಂಕ ಹಾಗೂ ಆನೇಕಲ್ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯಲು ಅನುಮತಿಯನ್ನು ನೀಡಲಾಗಿದೆ ಎಂದರು.
ರಾಗಿ ಖರೀದಿ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ಜಿಲ್ಲೆಗೆ ನೇಮಕ ಮಾಡಲಾಗಿದೆ. 2024-25 ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಲ್ಲಿ ರೈತರು ನೋಂದಾಯಿಸಿಕೊಂಡು, ಐಡಿ ಪಡೆಯುವುದು ಕಡ್ಡಾಯ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಜಿ.ಗುಣಕಿ ರವರು ಮಾತನಾಡಿ, ರಾಗಿ ಖರೀದಿ ಪ್ರಕ್ರಿಯೆಯನ್ನು ಜನವರಿ 01 2025 ರಿಂದ ಮಾರ್ಚ್ 31 2025 ರವರೆಗೆ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ. ಕೃಷಿ ಇಲಾಖೆಯಿಂದ ಖರೀದಿ ಕೇಂದ್ರಗಳಿಗೆ ಗ್ರೇಡರ್ ಗಳನ್ನು ನೇಮಿಸಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಜಿ.ಕಲಾವತಿ ಅವರು ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಒಟ್ಟು 16751 ಹೆಕ್ಟೇರ್ ನಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ, ಸುಮಾರು 28477 ಮೆ.ಟನ್ ರಾಗಿ ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೆ.ಎಫ್.ಸಿ.ಎಸ್.ಸಿ ನಿಗಮ ನಿಯಮಿತದ ಬೆಂಗಳೂರು ದಕ್ಷಿಣ ಹಾಗೂ ಉತ್ತರದ ಜಿಲ್ಲಾ ವ್ಯವಸ್ಥಾಪಕರಾದ ಪ್ರವೀಣ್ ಓಣಿಕೆರೆ, ತನ್ವೀರ್ ಅಲಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿಲ್ಪ.ಎ.ಇ ಮತ್ತು ಇತರರು ಉಪಸ್ಥಿತರಿದ್ದರು.