ಕೊಪ್ಪಳ : ತಹಶೀಲ್ದಾರ್ ಕಚೇರಿಗೆ ಏಕಾಏಕಿ ವ್ಯಕ್ತಿ ಓರ್ವ ನುಗ್ಗಿ ಕಬ್ಬಿಣದ ರಾಡ್ ನಿಂದ ಮಹಿಳಾ ಉಪತಾಶಿಲ್ದಾರ್ ಮೇಲೆ ಮೂರು ಬಾರಿ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಈ ದೃಶ್ಯ ನೋಡಿ ಸ್ವತಃ ಕಚೇರಿಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಹೌದು ಕೊಪ್ಪಳ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಉಪದರ್ಶಿಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ರೇಖಾ ದೀಕ್ಷಿತ್ ಎನ್ನುವ ಮಹಿಳೆಯು ಆಕೆಯ ಪರಿಚಯಸ್ತನಿಂದಲೇ ಹಲ್ಲೆಗೆ ಒಳಗಾಗಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಪ್ರಭು ಚೆನ್ನದಾಸರ್ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಕಚೇರಿಯಲ್ಲಿ ರೇಖಾ ಬ್ಯುಸಿಯಾಗಿದ್ರು. ಈ ವೇಳೆ ಪ್ರಭು, ಕಬ್ಬಿಣದ ರಾಡ್ ಹಿಡಿದು ಕಚೇರಿಗೆ ನುಗ್ಗಿ ಏಕಾಏಕಿ ರೇಖಾ ಮೇಲೆ ದಾಳಿ ಮಾಡಿದ್ದು, ರಾಡ್ನಿಂದ ರೇಖಾಳ ತಲೆಗೆ 3 ಬಾರಿ ಹೊಡೆದಿದ್ದಾನೆ. ರೇಖಾ ಕುಸಿದು ಬಿದ್ದರೂ ಸಹ ರಾಕ್ಷಸನಂತೆ ಥಳಿಸಿದ್ದಾನೆ. ಕೂಡಲೇ ಕಚೇರಿ ಸಿಬ್ಬಂದಿ ರೇಖಾರನ್ನ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಭು ರೇಖಾ ಗೆ ಕಳೆದ ಮೂರು ವರ್ಷಗಳಿಂದ ಪರಿಚಯಸ್ಥ ಎಂದು ಹೇಳಲಾಗುತ್ತಿದೆ. ಪ್ರತಿದಿನ ಕಚೇರಿಗೆ ಕರೆದುಕೊಂಡು ಬಂದು ಮತ್ತೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ. ಮನೆಯ ಸಣ್ಣ ಪುಟ್ಟ ಕೆಲಸ ಕೂಡ ಪ್ರಭು ಮಾಡುತ್ತಿದ್ದ. ಅಲ್ಲದೆ, ರೇಖಾ ಪ್ರಭುಗೆ ಹಣಕಾಸಿನ ನೆರವು ಕೂಡ ನೀಡಿದ್ದರಂತೆ. ಆದರೆ ನಿನ್ನೆ ಏಕಾಏಕಿ ಬಂದು ಹಲ್ಲೆ ಮಾಡಿದ್ದಾನೆ. ಇದೀಗ ಕೊಪ್ಪಳ ನಗರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.