ಬೆಂಗಳೂರು : ಮನೆ ಮಾರಿದ ಹಣಕ್ಕಾಗಿ ಹೆತ್ತ ತಾಯಿಯನ್ನೇ ಮಗನೊಬ್ಬ ಭೀಕರವಾಗಿ ಕೊಲೆ ಮಾಡಿದ್ದಾನೆ. ಇದಕ್ಕೆ ಮಗನಿಗೆ ಕೈ ಜೋಡಿಸಿದ ಸ್ನೇಹಿತ ಕೂಡ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಒಂದು ಘಟನೆ ಬೆಂಗಳೂರಿನ ಹೊಂಗಸಂದ್ರದಲ್ಲಿ ನಡೆದಿದೆ.
ಹೌದು ಜಯಮ್ಮ (45) ಎಂಬಾಕೆಯನ್ನು ಮಾರಕಾಸ್ತ್ರದಿಂದ ಹೊಡೆದು, ತಲೆಯನ್ನು ಗೋಡೆಗೆ ಗುದ್ದಿ ಹತ್ಯೆಗೈದಿದ್ದ ಮಗ ಉಮೇಶ್ ಹಾಗೂ ಮತ್ತೋರ್ವನನ್ನು ಬಂಧಿಸಲಾಗಿದೆ. ಬೊಮ್ಮನಹಳ್ಳಿ ವ್ಯಾಪ್ತಿಯ ಹೊಂಗಸಂದ್ರದ ಮನೆಯಲ್ಲಿ ಶನಿವಾರ ಘಟನೆ ನಡೆದಿತ್ತು.ಕೊಲೆಯಾದ ಜಯಮ್ಮ ಅವರಿಗೆ ಇಬ್ಬರು ಮಕ್ಕಳು ಎರಡನೆಯ ಮಗ ಗಿರೀಶ್ ಕೆಎಸ್ಆರ್ಟಿಸಿ ಸಂಸ್ಥೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.
ಇನ್ನು ಕೊಲೆಗೈದ ಮೊದಲನೇ ಮಗ ಉಮೇಶ್ ತಾಯಿಗೆ ತಮ್ಮನ ಮೇಲೆ ಪ್ರೀತಿ ಇದೆ ಮತ್ತು ನನ್ನ ಮೇಲೆ ಇಲ್ಲ ಎಂದು ಸದಾ ಗಲಾಟೆ ಮಾಡುತ್ತಿದ್ದ.ಹಾಗಾಗಿ ಮೊದಲ ಮಗ ಉಮೇಶನನ್ನು ಮನೆಯಿಂದ ಹೊರಹಾಕಿದ್ದ ಜಯಮ್ಮ, ಮನೆ ಮಾರಾಟ ಮಾಡಿ ಕಿರಿಯ ಪುತ್ರನೊಂದಿಗೆ ಹೊಂಗಸಂದ್ರದಲ್ಲಿ ವಾಸವಿದ್ದರು. ಕಳೆದ ಶುಕ್ರವಾರ ಮಧ್ಯರಾತ್ರಿ ಉಮೇಶ್ ತನ್ನ ಸ್ನೇಹಿತನೊಂದಿಗೆ ಬಂದು ತಾಯಿಯನ್ನು ಕೊಂದು ಪರಾರಿಯಾಗಿದ್ದ.
ಬಳಿಕ ಬೆಳಿಗ್ಗೆ ಕಿರಿಯ ಮಗನ ಸ್ನೇಹಿತ ಬಂದು ಬಾಗಿಲು ತಟ್ಟಿದಾಗ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡು ನಕಲಿ ಕೀ ಬಳಸಿ ಬಾಗಿಲು ತೆರೆದಾಗ ರಕ್ತದ ಮಡುವಿನಲ್ಲಿ ಜಯಮ್ಮ ಬಿದ್ದಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮೃತಳ ಹಿರಿಯ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬಯಲಾಗಿದೆ.