ಕೊಡಗು : ರಾಜ್ಯದಲ್ಲಿ ಇದೀಗ ವಕ್ಫ್ ವಿವಾದ ಭುಗಿಲೆದ್ದಿದ್ದು, ವಿಜಯಪುರದಿಂದ ಆರಂಭವಾದ ಈ ಒಂದು ವಿವಾದ ಇದೀಗ ಇಡೀ ರಾಜ್ಯಾದ್ಯಂತ ಹಬ್ಬಿಕೊಂಡಿದೆ. ಮೊದಲಿಗೆ ರೈತರ ಜಮೀನುಗಳು ಅಷ್ಟೇ ಎಂದು ಕೊಂಡರೆ ಬಳಿಕ ಮಠ ಮಾನ್ಯಗಳು, ಸರ್ಕಾರಿ ಕಚೇರಿಗಳು, ಶಾಲೆಗಳು ಎಲ್ಲವು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈಗ ಕೊಡಗಿನ ದೈವಾರಾಧನೆ ದೇವಸ್ಥಾನ ಒಂದು ವಕ್ಫ್ ಗೆ ಸೇರಿದೆ ಎಂದು ಪಹಣಿಯಲ್ಲೇ ನಮೂದಾಗಿದೆ.
ಹೌದು ಕೊಡಗಿನ ಸೋಮವಾರಪೇಟೆ ಪಟ್ಟಣದ ಹೃದಯ ಭಾಗದಲ್ಲಿ ವನದುರ್ಗಾ ದೇವಾಲಯದ ಟ್ರಸ್ಟ್‌ನ ಸುಮಾರು 11 ಎಕರೆ ಜಾಗದ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿದೆ. ಇದು ಹಿಂದೂಗಳ ದೇವಾಲಯ ಅನ್ನೋದಕ್ಕೆ ನೂರಾರು ವರ್ಷಗಳ ಹಿಂದೆ ಹಳೆಗನ್ನಡದಲ್ಲಿ ಬರೆದಿರುವ ಚೌಡೇಶ್ವರಿ ದೇವಾಲಯದ ಕಲ್ಲು ಸಹ ಸಾಕ್ಷಿಯಿದೆ.
ಪ್ರತಿ ವರ್ಷ ಈ ದೇವಾಲಯದಲ್ಲಿ ವಾರ್ಷಿಕೋತ್ಸವ, ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ದೇವಾಲಯದೊಂದಿಗೆ ಭಕ್ತರಿಗೆ ಭಾವನ್ಮಾಕ ಸಂಬಂಧ ಇದೆ. ಈ ನಡುವೆ ವಕ್ಫ್ ಆಸ್ತಿ ವಿವಾದ ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದೆ.
10 ವರ್ಷಗಳ ಹಿಂದೆ ದೇವಸ್ಥಾನದ 11 ಎಕರೆ ಜಾಗದ ಆರ್‌ಟಿಸಿಯಲ್ಲಿ ಸಂಗಮನಾಥ್ ಪಟೇಲ್ ಪೂವಯ್ಯ, ಅಬ್ದುಲ್ ಗನಿ, ಮಹಮ್ಮದ್ ಇಬ್ರಾಹಿಂ, ಟ್ರಸ್ಟಿ ಎಂದು ನಮೂದಾಗಿತ್ತು. ಆದರೀಗ ಜುಮ್ಮ ಮಸೀದಿ, ಸುನ್ನಿ ನಗರೂರು ಮತ್ತು ವಕ್ಪ್ ಆಸ್ತಿ ಎಂದು ಉಲ್ಲೇಖವಾಗಿದೆ. ಇದರಿಂದ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.