ತುಮಕೂರು : ತುಮಕೂರಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಮನೆಯಿಂದ ಗುರುವಾರ ಸಂಜೆ ಕಾಣೆಯಾಗಿದ್ದ ಇಬ್ಬರು ಮಕ್ಕಳು ಇಂದು ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತುಮಕೂರು ತಾಲೂಕಿನ ತಿಪಟೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಮೃತ ಮಕ್ಕಳನ್ನು ತಿಪಟೂರು ತಾಲೂಕಿನ ಹುಚ್ಚನಹಟ್ಟಿಯ ಮನೋಹರ್(8), ಯದುವೀರ್ (10) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಇವರಿಬ್ಬರು ಬಳಿಕ ಹೊರಗಡೆ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ.ಇದರಿಂದ ಆತಂಕಗೊಂಡ ಪೋಷಕರು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಳಿಕ ತಿಪಟೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಇಂದು ಬೆಳಗ್ಗೆ ಮತ್ತೆ ಹುಡುಕಾಡಿದಾಗ ಇಬ್ಬರು ಬಾಲಕರ ಮೃತದೇಹಗಳು ನಗರಕ್ಕೆ ಹೊಂದಿಕೊಂಡಿರುವ ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆಯ ಕಾಮಗಾರಿಗೆ ತೆಗೆದಿದ್ದ ಗುಂಡಿಯಲ್ಲಿ ಪತ್ತೆಯಾಗಿವೆ. ನೀರಿನಲ್ಲಿ ಆಟವಾಡಲು ಹೋದ ವೇಳೆ ಮಕ್ಕಳು ಗುಂಡಿಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಮಕ್ಕಳ ಮೃತದೇಹ ಕಂಡು ಹೆತ್ತವರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.