ಬೆಂಗಳೂರು : ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಆಗಾಗ ಬಿಡುವು ಮಾಡಿಕೊಂಡು ಚಹಾ ಹಾಗೂ ಸಿಗರೇಟ್, ತಂಬಾಕು ಉತ್ಪನ್ನಗಳ ಸೇವಿಸಿ ಬರುತ್ತಾರೆ.ಇದೀಗ ರಾಜ್ಯ ಸರ್ಕಾರ ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಸರ್ಕಾರಿ ಕಚೇರಿ ಆವರಣದಲ್ಲಿ ಸಿಗರೇಟು ತಂಬಾಕು ಉತ್ಪನ್ನಗಳನ್ನು ಸೇವಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆದೇಶ ಹೊರಡಿಸಿದೆ.
ಹೌದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಯಾವುದೇ ಸರ್ಕಾರಿ ನೌಕರನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಎಚ್ಚರಿಕೆಯ ಫಲಕವನ್ನು ಕಚೇರಿಯ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ-31ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯ ಅಥವಾ ಮಾದಕ ವಸ್ತುವನ್ನು ಸೇವಿಸುವುದನ್ನು ಕೂಡ ನಿಷೇಧಿಸಲಾಗಿದೆ. ಶಾಸನತ್ಮಾಕ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿಯ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರನ್ನು ಹಾಗೂ ಸರ್ಕಾರಿ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ಯಾವುದೇ ಸರ್ಕಾರಿ ನೌಕರನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಎಚ್ಚರಿಕೆಯ ಫಲಕವನ್ನು ಕಚೇರಿಯ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸತಕ್ಕದ್ದು ಎಂದು ಸೂಚಿಸಲಾಗಿದೆ.