ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ 2 ಗಂಟೆ ವಿಚಾರಣೆ ಎದುರಿಸಿದ್ದರು.ಈ ವೇಳೆ ನಗುಮುಖದಿಂದಲೇ ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಹೊರ ಬಂದಿದ್ದಾರೆ. ಬೆಳಿಗ್ಗೆ 10 ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಮಧ್ಯಾಹ್ನ 12 ಗಂಟೆಗೆ ಲೋಕಾಯುಕ್ತ ಕಚೇರಿಯಿಂದ ವಾಪಸ್ ತೆರಳಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮತ್ತೆ ವಿಚಾರಣೆಗೆ ಬರಲು ಲೋಕಾಯುಕ್ತ ಅಧಿಕಾರಿಗಳು ಹೇಳಿಲ್ಲ.ಕಾನೂನು ಪ್ರಕಾರವೇ ನಿವೇಶನ ಪಡೆದಿದ್ದೇನೆ. ಬಿಜೆಪಿ, ಜೆಡಿಎಸ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿವೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದು ಇದೆ ವೇಳೆ ತಿಳಿಸಿದರು.
ಇನ್ನು, ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಬಿಜೆಪಿಯವರು ಆಗ್ರಹಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಯಾವುದಾದರೂ ಕೇಸ್ ಸಿಬಿಐಗೆ ಕೊಟ್ಟಿದ್ದಾರಾ? ಲೋಕಾಯುಕ್ತ ಸ್ವತಂತ್ರವಾಗಿ ತನಿಖೆ ಮಾಡುತ್ತಿರುವ ಸಂಸ್ಥೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗೆ ಉತ್ತರಿಸಿದ್ದೇನೆ. ಎಲ್ಲವೂ ಕೂಡ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ, ಜೆಡಿಎಸ್ನವರು ಮಾಡಿದ್ದ ಸುಳ್ಳು ಆರೋಪಗಳಿಗೆ ಕೋರ್ಟ್ನಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದರು.