ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅವರ ವಿಚಾರಣೆಗೆ ಹಾಜರಾಗಬೇಕಿತ್ತು. ಚೆನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಅವರು ಚುನಾವಣೆಯಲ್ಲಿ ಭಾಗಿಯಾಗಿದ್ದರಿಂದ ವಿಚಾರಣೆಗೆ ಗೈರಾಗಿದ್ದಾರೆ. ಇದರಿಂದಾಗಿ ಕೋರ್ಟ್ ಜಡ್ಜ್ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹೌದು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಕುರಿತು ವಿಚಾರಣೆ ನಡೆಯಿತು.ಈ ವೇಳೆ ಪದೇ ಪದೇ ನೀವು ಟೈಮ್ ಕೇಳುತ್ತಿದ್ದೀರಿ. ಮುಂದಿನ ವಿಚಾರಣೆ ವೇಳೆ ಬರುತ್ತಾರೆ ಎಂದು ಹೇಳುತ್ತೀರಿ ಎಂದು ಜಡ್ಜ್ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ವಿಚಾರಣೆಗೆ ಗೈರಾಗಿದ್ದಾರೆ. ವಿನಾಯಿತಿ ನೀಡುವಂತೆ ಹೆಚ್ ಡಿ ಕುಮಾರಸ್ವಾಮಿ ಅವರ ಪರ ವಕೀಲರು ಕೋರ್ಟಿಗೆ ಮನವಿ ಮಾಡಿದ್ದಾರೆ. ಎಷ್ಟು ಸಲ ನಿಮಗೆ ಟೈಮ್ ಕೊಡುವುದು? ಪದೇಪದೇ ನೀವು ಟೈಮ್ ಕೇಳುತ್ತಿದ್ದೀರಿ ಮುಂದಿನ ವಿಚಾರಣೆ ವೇಳೆ ಬರುತ್ತಾರೆ ಎಂದು ಹೇಳುತ್ತೀರಿ ಮತ್ತೆ ಬಂದು ವಿನಾಯಿತಿಗೆ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದು ಜಡ್ಜ್ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಏನಿದು ಪ್ರಕರಣ?
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಳ್ಳಾರಿಯ ಸಂಡೂರಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಭೂಮಿ ಮಂಜೂರು ಮಾಡಿದ್ದರು. ನಿಯಮ ಉಲ್ಲಂಘಿಸಿ 550 ಹೆಕ್ಟೇರ್ ಭೂಮಿ ಮಂಜೂರು ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು 2011ರ ಲೋಕಾಯುಕ್ತರ ವರದಿಯಲ್ಲಿ ಕೂಡ ಉಲ್ಲೇಖ ಮಾಡಲಾಗಿತ್ತು. ಅದಾದ ಬಳಿಕ ಲೋಕಾಯುಕ್ತರು ತನಿಖೆ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
2023ರ ನವೆಂಬರ್ 21ರಂದು ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವಂತೆ ಕೇಳಿದ್ದರು. ಇದೀಗ ಬರೋಬ್ಬರಿ 8 ತಿಂಗಳ ಬಳಿಕ ಲೋಕಾಯುಕ್ತರು ಎಸ್ಐಟಿಗೆ ಸ್ಪಷ್ಟನೆ ಕೇಳಿದ್ದಾರೆ. ಇದೇ ವರ್ಷ ಜುಲೈ 29ರಂದು ಎಸ್ಐಟಿಗೆ ಪತ್ರ ಬರೆದಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯೆ ಕೊಟ್ಟ ಎಸ್ಐಟಿ ಮುಖ್ಯಸ್ಥರು, ರಾಜ್ಯಪಾಲರಿಗೆ ಆಗಸ್ಟ್ 21ರಂದು ಸ್ಪಷ್ಟನೆ ನೀಡಿದ್ದಾರೆ. ಈ ಸ್ಪಷ್ಟನೆಯಲ್ಲೇ ಚಾರ್ಜ್ಶೀಟ್ ಸಲ್ಲಿಸಲು ಅನುಮತಿ ಕೊಡಿ ಎಂದು ಲೋಕಾಯುಕ್ತರು ಮನವಿ ಮಾಡಿದ್ದಾರೆ.