ರಾಮನಗರ : ರಾಜ್ಯದ ಮೂರು ಕ್ಷೇತ್ರಗಳಲ್ಲಿ ವಿಧಾನಸಭಾ ಉಪಚುನಾವಣೆಯ ರಂಗೇರಿದು ಅದರಲ್ಲೂ ಚನ್ನಪಟ್ಟಣ ಕ್ಷೇತ್ರ ತುಸು ಬಿರುಸಿನಿಂದ ಕೂಡಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಕಣಕ್ಕೆ ಇಳಿದಿದ್ದರೆ ಇನ್ನು ಎನ್.ಡಿ.ಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರು ನಿಖಿಲ್ ಕುಮಾರ್ ಸ್ವಾಮಿ ಪಾಪ ಒಬ್ಬ ಕಂದ. ಆತ ಅಳು ಅಂದರೆ ಅಳುತ್ತಾನೆ ನಗು ಅಂದ್ರೆ ನಗುತ್ತಾನೆ. ಆತನ ಕುರಿತು ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರ ಪರವಾಗಿ ಪ್ರಚಾರದ ವೇಳೆ ಮಾತನಾಡಿದ ಅವರು, ಪಾಪ ಕಂದ ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಅಂದರೂ ಹಾಕುತ್ತಾನೆ, ನಗು ಅಂದರೆ ನಗುತ್ತಾನೆ. ಆತನನ್ನು ನಾನು ಪ್ರಶ್ನಿಸುವುದಿಲ್ಲ. ಆತ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದಾನೆ. ಆತ ಒತ್ತಾಯಕ್ಕೆ ಸ್ಪರ್ಧಿಸಿದ್ದಾನೆಯೇ ಹೊರತು. ಜನರ ಸೇವೆಗಾಗಿ ಅಲ್ಲಿ ನಿಮ್ಮ ಕಷ್ಟ ಸುಖಕ್ಕೆ ಭಾಗಿಯಾಗಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.
ನಾನು ಹಾಗೂ ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಗೂ ಮುನ್ನ 5 ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ಅದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇಂತಹ ಒಂದೇ ಒಂದು ಯೋಜನೆಯನ್ನು ನೀಡದ ಕುಮಾರಣ್ಣ ಇಲ್ಲಿ ಬಂದು ಮತ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.