ಹಾವೇರಿ : ಇತ್ತೀಚಿಗೆ ಶಕ್ತಿ ಯೋಜನೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಕೂಡ ಅಸಮಾಧಾನ ಹೊರ ಹಾಕಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ನಾನು ಅಧಿಕಾರದಲ್ಲಿ ಇರುವವರೆಗೂ ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಹಿಂದೂ ಮುಸ್ಲಿಮರನ್ನು ಎತ್ತಿ ಕಟ್ಟುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರದಲ್ಲಿ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ಬಿಜೆಪಿ ಜೆಡಿಎಸ್ ನಾಯಕರು ವಿಚಾರವಾಗಿ ವಿವಾದ ಮಾಡುತ್ತಿದ್ದಾರೆ.ಗ್ಯಾರಂಟಿ ಘೋಷಣೆ ಮಾಡಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರೋಧಿಸಿದ್ದರು.
ಈಗ ಶಕ್ತಿ ಯೋಜನೆ ದುರ್ಬಲ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.ಆದರೆ ನಾನು ರಾಜ್ಯದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ . ನಾವು ಅಧಿಕಾರದಲ್ಲಿ ಇರುವವರೆಗೂ ಎಲ್ಲಾ ಯೋಜನೆಗಳು ಮುಂದುವರೆಸುವೆ.ಯಾವುದೇ ಯೋಜನೆ ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಇನ್ನು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೈಸೂರು ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 6ರಂದು ವಿಚಾರಣೆಗೆ ಹಾಜರಾಗಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ನಾನು ಯಾವತ್ತೂ ಕಳಂಕವಾಗಿ ಕೆಲಸ ಮಾಡಿಲ್ಲ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ತಿಳಿಸಿದರು.
ಬಡವರಿಗೆ ನಾನು ಮಾಡಿದ ಕೆಲಸ ಸಹಿಸಿಕೊಳ್ಳಲಾಗದೆ ನನ್ನ ವಿರುದ್ಧ ಇಂತಹ ಆರೋಪ ಮಾಡಿದ್ದಾರೆ. ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.ನಾನು ಯಾವತ್ತೂ ಕಳಂಕವಾಗಿ ಕೆಲಸ ಮಾಡಿಲ್ಲ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ತಪ್ಪು ಮಾಡದಿದ್ದರೂ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ.
ಎಲ್ಲೆಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳು ಇದ್ದಾರೋ ಅಲ್ಲಿ ಸುಳ್ಳು ಕೇಸ್ ಗಳನ್ನು ಹಾಕಿಸಿ ಕಿರುಕುಳ ನೀಡುತ್ತಿದ್ದಾರೆ. ಬಂಕಾಪುರವನ್ನು ತಾಲೂಕು ಮಾಡುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಸುಳ್ಳು ಹೇಳಿದ್ದರು ನಾಲ್ಕು ಬಾರಿ ಬೊಮ್ಮಾಯಿ ಸುಳ್ಳು ಹೇಳಿದ್ರು ಈಗ ಮಗನನ್ನು ಎಲೆಕ್ಷನ್ ನಲ್ಲಿ ನಿಲ್ಲಿಸಿದ್ದಾರೆ ಎಂದು ಬಂಕಾಪುರದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.