ಯಾದಗಿರಿ : ಸಂಬಂಧಿಕರ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಲು ಆಗಮಿಸಿದ್ದ ಯುವಕ, ಕೃಷ್ಣಾ ನದಿಯಲ್ಲಿ ಸ್ಥಾನಕ್ಕೆಂದು ತೆರಳಿದ ವೇಳೆ ಕಾಲು ಜಾರಿ ಬಿದ್ದು ಸಾವನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಮಂಗಳೇಶ್ ಬಡಿಗೇರ್ (26) ಎಂದು ತಿಳಿದುಬಂದಿದೆ. ಈತ ಕೊಪ್ಪಳ ಜಿಲ್ಲೆಯ ಕುಕನೂರ್ ತಾಲೂಕಿನ ಮಂಗಳೂರು ಮೂಲದ ನಿವಾಸಿ ಎಂದು ಹೇಳಲಾಗುತ್ತಿದೆ. ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಸಂಬಂಧಿಕರ ಜವಳ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಈ ಒಂದು ದುರಂತ ಸಂಭವಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ, ಪೋಲಿಸರು ಆಗಮಿಸಿದ್ದು, ಸ್ಥಳೀಯ ಅಂಬಿಗರ ಸಹಾಯದಿಂದ ಸತತ ಮೂರು ಗಂಟೆಗಳ ಶೋಧ ಕಾರ್ಯ ನಡೆಸಿ, ಮೃತ ದೇಹವನ್ನು ಹೊರತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸುರಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸುರಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ