ಬೆಳಗಾವಿ : ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೊನಿ ಶಾಲಾ ಮೈದಾನದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇನ್ನು ಕೊಲೆಯಾದ ಯುವಕನನ್ನು ರವಿ ತಿಮ್ಮನ್ನವರ(23) ಎಂದು ತಿಳಿದುಬಂದಿದೆ. ಯುವಕನ ಮೇಲೆ ದುಷ್ಕರ್ಮಿಗಳು, ಕುಡಗೋಲು, ಮದ್ಯದ ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. 13ಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ಯುವಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರಕ್ತ ಮಡುವಿನಲ್ಲಿ ಪ್ರಜ್ಞೆತಪ್ಪಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.