ಬೆಂಗಳೂರು: ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಅ.ನಾ.ಪ್ರಹ್ಲಾದರಾವ್ ಭಾರತದಲ್ಲೇ ಅತಿ ಹೆಚ್ಚು ಪದಬಂಧ ರಚಿಸಿದ ದಾಖಲೆಗೆ ಒಳಗಾಗಿದ್ದು, 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
1975ರಲ್ಲಿ ಕೋಲಾರದ ಮೊದಲನ ದೈನಿಕ ಕೋಲಾರಪತ್ರಿಕೆ ಆರಂಭಗೊಂಡಾಗ ಪತ್ರಿಕೆಯ ವರದಿಗಾರನಾಗಿ ಪತ್ರಿಕಾರಂಗ ಪ್ರವೇಶಿಸಿದ ಇವರು 1979ರಲ್ಲಿ ಕೋಲಾರದಲ್ಲಿ ಕೆಲವು ಮಿತ್ರರ ಜೊತೆಯಾಗಿ ‘ಹೊನ್ನುಡಿ’ ದಿನಪತ್ರಿಕೆ ಆರಂಭಿಸಿ ಸ್ಥಾಪಕ ಸಂಪಾದಕರಾದರು. ಇದರ ಜೊತೆ ಹಿಂದೂಸ್ಥಾನ್ ಸಮಾಚಾರ್ ವಾರ್ತಾ ಸಂಸ್ಥೆಯ ಜಿಲ್ಲಾ ಬಾತ್ಮೀದಾರರಾಗಿ ಕಾರ್ಯ ನಿರ್ವಹಿಸಿದರು. 1983ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿ 30 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು. ಪ್ರಮುಖವಾಗಿ ಮಂಡ್ಯ ಹಾಗೂ ರಾಮನಗರ ಜಿಲ್ಲಾ ವಾರ್ತಾಧಿಕಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದರು.
ವೃತ್ತಿಯ ಜೊತೆ ಪ್ರವೃತ್ತಿಯಾಗಿ 1984ರಲ್ಲಿ ಪದಬಂಧ ರಚನೆ ಆರಂಭಿಸಿದ ಪ್ರಹ್ಲಾದರಾವ್ ಕಳೆದ 40 ವರ್ಷಗಳಲ್ಲಿ 45 ಸಾವಿರ ಪದಬಂಧಗಳನ್ನು ಬರೆದಿದ್ದು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 20 ಪದಬಂಧ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೂರು ಬಾರಿ ಭಾರತದಲ್ಲೇ ಅತಿ ಹೆಚ್ಚು ಪದಬಂಧ ರಚಸಿದ್ದಕ್ಕಾಗಿ ಲಿಮ್ಕಾ ಬುಕ್ ದಾಖಲೆಗೆ ಸೇರಿದ್ದಾರೆ. ಇದೇ ಕಾರಣಕ್ಕೆ ಅಬ್ದುಲ್ ಕಲಾಂ ವಿಶ್ವ ದಾಖಲೆಯಲ್ಲಿಯೂ ಸೇರಿಕೊಂಡಿದ್ದಾರೆ. ಡಾ.ರಾಜಕುಮಾರ್ ಜೀವನ ಸಾಧನೆ ಕುರಿತು ಬರೆದ ‘ಬಂಗಾರದ ಮನುಷ್ಯ’ ಕೃತಿ ರಾಜಕುಮಾರ್ ಅವರಿಂದ ಶ್ಲಾಘಿಸಲ್ಪಟ್ಟಿತಲ್ಲದೆ ಆರು ಮುದ್ರಣಗಳನ್ನು ಕಂಡವು. ಕನ್ನಡ ಸಿನಿಮಾ ಇತಿಹಾಸ ಕುರಿತಂತೆ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಸಚಿವ ಪ್ರಿಯಾಂಕ್ ಖರ್ಗೆ ಆವರ ಮಾಧ್ಯಮ ಸಮನ್ವಯಾಧಿಕಾರಿಯಾಗಿದ್ದಾರೆ.
ಹಾಸನಾಂಬೆ ದರ್ಶನ ಪಡೆದ 19 ಲಕ್ಷ ಜನ, ಇದು ಸರ್ಕಾರದ ಶಕ್ತಿ ಯೋಜನೆಯ ಸಾಧನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಆರ್.ಅಶೋಕ್
ಪ್ರಯಾಣಿಕರಿಗೆ ಗುಡ್ ನ್ಯೂಸ್: ಛತ್ ಪೂಜೆ ಹಬ್ಬಕ್ಕೆ ವಿಶೇಷ ರೈಲು ಸಂಚಾರ