ಬೆಂಗಳೂರು : ಬೆಂಗಳೂರಿನ ಜನತೆಗೆ ಬಿಬಿಎಂಪಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಬೆಂಗಳೂರಿನ ಅತಿ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ಬಿಬಿಎಂಪಿ ಇದೀಗ ಜಾಗ ಅಂತಿಮಗೊಳಿಸಿದೆ. ಬೆಂಗಳೂರಿನ ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿದ್ದು, ಈ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಆಕ್ಷೇಪಣೆ ಇದ್ದರೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಪ್ರವಾಸೋದ್ಯಮ ಉತ್ತೇಜನದ ಜೊತೆಗೆ ಬೆಂಗಳೂರು ನಗರವನ್ನು ವೀಕ್ಷಣೆ ಮಾಡುವ ಉದ್ದೇಶದಿಂದ ಆಕಾಶ ಗೋಪುರ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿತ್ತು. ಇದಕ್ಕಾಗಿ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಗುರುತಿಸಲಾಗಿತ್ತು.
ಆದರೆ ಇದೀಗ ರಾಜ್ಯ ಸರ್ಕಾರ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬ್ರ‍್ಯಾಂಡ್ ಬೆಂಗಳೂರಿನಡಿ ಅತಿ ಎತ್ತರದ ಆಕಾಶ ಗೋಪುರ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಹೆಮ್ಮಿಗೆಪುರದಲ್ಲಿ ಜಾಗ ಕೂಡ ಫೈನಲ್ ಆಗಿದೆ. ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡೋದಕ್ಕೆ ಆಕ್ಷೇಪಣೆ ಇದ್ದರೆ ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿ ಸಾರ್ವಜನಿಕರಿಗೆ ಮನವಿ ಮಾಡಿದೆ.
ಸ್ಕೈ ಡೆಕ್ ಬೆಂಗಳೂರಿನ ವೈಮಾನಿಕ ನೋಟವನ್ನು ಒದಗಿಸುವ ಮೂಲಕ ಸಮಗ್ರ ಪ್ರವಾಸಿ ತಾಣವಾಗಲು ಸಜ್ಜಾಗಿದೆ. ಅದರ ಪ್ರಾಥಮಿಕ ಕಾರ್ಯವನ್ನು ಮೀರಿ, ವಾಹನ ನಿಲುಗಡೆ, ರೆಸ್ಟೋರೆಂಟ್‌ಗಳು, ಥಿಯೇಟರ್ ಮತ್ತು ಸ್ಕೈ ಗಾರ್ಡನ್‌ನಂತಹ ಸೌಕರ್ಯಗಳನ್ನು ಹೊಂದಿರುತ್ತದೆ. ಮೇಲಿನ ವಿಭಾಗವು ರೋಲರ್-ಕೋಸ್ಟರ್ ಸ್ಟೇಷನ್, ಎಕ್ಸಿಬಿಷನ್ ಹಾಲ್, ಸ್ಕೈ ಲಾಬಿ, ಬಾರ್ ಮತ್ತು ವಿಐಪಿಗಳಿಗಾಗಿ ವಿಶೇಷ ಸ್ಥಳ ಒಳಗೊಂಡಿರುತ್ತದೆ.