ತುಮಕೂರು : ಕಳೆದ ಕೆಲವು ತಿಂಗಳುಗಳ ಹಿಂದೆ ತುಮಕೂರಲ್ಲಿ ಮೀಟರ್ ಬಡ್ಡಿ ಕಿರುಕುಳಕ್ಕೆ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿತ್ತು. ಈ ಹಿನ್ನೆಲೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ಕೂಡ ಈ ಒಂದು ಮೀಟರ್ ದಂಧೆ ನಿಂತಿಲ್ಲ.ಇದೀಗ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕನನ್ನು ಅರುಣ್ ಕುಮಾರ್ (34) ಎಂದು ತಿಳಿದುಬಂದಿದೆ. ಅರುಣ್ ಕುಮಾರ್ ಗುಬ್ಬಿ ಪಟ್ಟಣ ಪಂಚಾಯತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅರುಣ್ ಕುಮಾರ್ 1 ಲಕ್ಷ ಹಣವನ್ನ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದರು. ಸಾಲ ಪಡೆದಿದ್ದ 1 ಲಕ್ಷ ಹಣಕ್ಕೆ 5 ಲಕ್ಷ ಹಣ ಕೊಡುವಂತೆ ಮೀಟರ್ ಬಡ್ಡಿ ದಂಧೆಕೋರರು ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಪದೇ ಪದೇ 1 ಲಕ್ಷಕ್ಕೆ 5 ಲಕ್ಷ ಬಡ್ಡಿ ನೀಡುವಂತೆ ದಂಧೆಕೋರರು ಅರುಣ್ ಕುಮಾರ್ ಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಅರುಣ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.