ಯಾದಗಿರಿ : ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ವ್ಯಕ್ತಿಯನ್ನು ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗ್ರಾಮದ ಎಎಂಡಿ ಕ್ಯಾಂಪಿನ ಬಳಿ ಸಂಜೆ ನಡೆದಿದೆ.
ಕೊಲೆಯಾದ ವ್ಯಕ್ತಿ ಜಾಪಾನಾಯಕ ತಾಂಡಾದ ತಿಪ್ಪಣ್ಣ (35) ಎಂದು ತಿಳಿದು ಬಂದಿದೆ.ನಾಲ್ಕಾರು ಜನ ಸೇರಿ ಬೈಕ್ ಮೇಲೆ ಹೊರಟಿದ್ದ ತಿಪ್ಪಣ್ಣನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಶಿಳ್ಳೆ, ಕೇಕೆ ಹಾಕುತ್ತಾ ಟೊಕಾಪುರ ರಸ್ತೆ ಮೂಲಕ ತೆರಳಿದರು ಎಂದು ಕೊಲೆ ನಡೆದಿದ್ದನ್ನು ನೋಡಿದವರು ತಿಳಿಸಿದ್ದಾರೆ.
ಹಳೇ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಪಿಐ ಎಸ್.ಎಂ.ಪಾಟೀಲ್ ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಸ್ ಪಿ ಭೇಟಿ ನೀಡಿ ಪರಿಶೀಲನೆಗೆ ಸೂಚಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.